ಜಿಕ್ಕಮಗಳೂರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಸಾಮಾನ್ಯ ಚುನಾವಣೆ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಹಿಂಪಡೆದಿದ್ದಾರೆ.
ಹಾಲಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಅಧಿಕಾರ ಅವಧಿ 29-09-2025ಕ್ಕೆ ಮುಕ್ತಾಯಗೊಳ್ಳಲಿದ್ದು, ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಚುನಾವಣಾ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ವಿವಿಧ ಕಾರಣಗಳನ್ನು ನೀಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಫೆಡರಲ್ ಸಹಕಾರ ಸಂಘಗಳ ಚುನಾವಣಾಧಿಕಾರಿಯೂ ಆಗಿರುವ ಮೀನಾ ನಾಗರಾಜ್ ಅವರು ಚುನಾವಣಾ ಅಧಿಸೂಚನೆಯನ್ನು ಹಿಂಪಡೆದಿದ್ದಾರೆ.
ನೂತನ ಆಡಳಿತ ಮಂಡಳಿ ರಚನೆಗೆ ದಿನಾಂಕ 13-09-2025ರಂದು ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. ಅದಕ್ಕಾಗಿ ಸಾಕಷ್ಟು ತಯಾರಿಗಳನ್ನು ನಡೆಸಲಾಗಿತ್ತು. ವಿವಿಧ ರಾಜಕೀಯ ಪಕ್ಷಗಳು, ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಚುನಾವಣೆಗಾಗಿ ರಣತಂತ್ರ ರೂಪಸುತ್ತಿದ್ದರು. ಇದೀಗ ದಿಢೀರ್ ಎಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹಿಂಪಡೆದಿದ್ದಾರೆ.
ಚುನಾವಣೆಗಾಗಿ ದಿನಾಂಕ 30-06-2025ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಹಾಗೇಯ ಮತದಾರರ ಪಟ್ಟಿಯ ಬಗ್ಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ 14-08-2025 ಕೊನೆ ದಿನವಾಗಿತ್ತು. ನಿಗದಿತ ಅವಧಿಯೊಳಗೆ 2 ಆಕ್ಷೇಪಣೆಗಳು ಬಂದಿವೆ. ಕಡೂರು ತಾಲ್ಲೂಕಿನ ಯಗಟಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಕಡೂರು ತಾಲ್ಲೂಕು ಅಂತರಘಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಕಾಂತರಾಜು ಎಂಬುವವರು ಆಕ್ಷೇಪಣೆಗಳನ್ನು ಸಲ್ಲಿಸಿರುತ್ತಾರೆ.
ಸದರಿ ಆಕ್ಷೇಪಣೆಗಳ ಬಗ್ಗೆ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದ್ದು, ಡಿಸಿಸಿ ಬ್ಯಾಂಕ್ ಚುನಾವಣೆ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿರುತ್ತಾರೆ.







