ಮೂಡಿಗೆರೆ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಮದ್ಯಪಾನದಿಂದ ಜನರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ದೇವರ ಮುಂದೆ ಮುಂದೆ ಪ್ರಾರ್ಥನೆ ಮಾಡಿದ ಅಪರೂಪದ ಘಟನೆ ನಡೆದಿದೆ.
ಗ್ರಾಮದಲ್ಲಿ ಕೆಲವು ಮಂದಿ ಮದ್ಯಪಾನದಿಂದ ತಮ್ಮ ಆರೋಗ್ಯ ಮತ್ತು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದು, ಇದರಿಂದ ಬೇಸತ್ತು ಗ್ರಾಮದ ಕೆಲ ಯುವಕರು ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಸೇರಿ ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಜಯಂತ್, ಅಶ್ವಥ್, ಶೋಧನ, ಜಯಕುಮಾರ್, ಧರ್ಮೇಶ್, ಕಾರ್ತಿಕ್, ಪ್ರಸನ್ನ, ಪ್ರೀತಮ್ ಹಾಗೂ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂಬಂಧ ಪತ್ರಿಕೆಗೆ ಮಾಹಿತಿ ನೀಡಿರುವ ಗ್ರಾಮದ ಜಯಂತ್ ; ಮದ್ಯಪಾನದಿಂದಾಗಿ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆ ಎದುರಾಗುತ್ತಿದೆ. ಜನರು ಮದ್ಯಪಾನಕ್ಕೆ ಬಲಿಯಾಗಿ ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಬಡ ಅನಕ್ಷರಸ್ಥರು, ಕೂಲಿ ಕಾರ್ಮಿಕರು, ಪರಿಶಿಷ್ಟ ಸಮೂದಾಯದವರು ಮದ್ಯಪಾನ ಹಾವಳಿಯಿಂದ ತಮ್ಮ ದುಡಿಮೆಯ ಬಹುಭಾಗವನ್ನು ಮದ್ಯಪಾನಕ್ಕೆ ವಿನಿಯೋಗಿಸುತ್ತಿದ್ದಾರೆ. ಪುರುಷರು ಮಾತ್ರವಲ್ಲ ಕೆಲ ಮಹಿಳೆಯರು ಮದ್ಯಪಾನಕ್ಕೆ ದಾಸರಾಗುತ್ತಿದ್ದಾರೆ. ಇದರಿಂದ ನಿತ್ಯ ಮನೆಗಳಲ್ಲಿ ಜಗಳ ನಡೆಯುತ್ತದೆ. ಇದರಿಂದ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಗ್ರಾಮದಲ್ಲಿ ಅಕ್ರಮವಾಗಿ ಮದ್ಯಪಾನ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿಬೇಕು ಎಂದು ಆಗ್ರಹಿಸುತ್ತಲೇ ಇದ್ದೇವೆ, ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಮದ್ಯಪಾನ ಹಾವಳಿ ಇಂದ ಬೇಸತ್ತು ಅಂತಿಮ ಪ್ರಯತ್ನ ಎಂಬಂತೆ ದೇವರ ಮುಂದೆ ಪ್ರಾರ್ಥನೆ ಮಾಡಲಾಯಿತು, ಇನ್ನೂ ಮುಂದೆ ಯಾರೂ ಯಾವುದೇ ಕಾರಣಕ್ಕೂ ಹೊಸಕೆರೆ ಗ್ರಾಮದವರಿಗೆ ಮದ್ಯ ಮಾರಾಟ ಮಾಡಬಾರದು ಎಂದು ಗ್ರಾಮಸ್ಥರು ಸೇರಿ ದೇವರ ಮುಂದೆ ಪ್ರಾರ್ಥನೆ ಮಾಡಿದ್ದೇವೆ ಎಂದಿದ್ದಾರೆ.




