ಇತ್ತೀಚೆಗೆ ಮೂಡಿಗೆರೆ ಪಟ್ಟಣದ ರೈತ ಭವನದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಆಟೋ ಚಾಲಕ ಮಂಜುನಾಥ್ ಅವರ ಕುಟುಂಬಕ್ಕೆ ಸರಕಾರ 25.00 ಲಕ್ಷ ರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮೂಡಿಗೆರೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಮುಖಂಡರು ಮಂಗಳವಾರ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಅಮರನಾಥ್ ಮಾತನಾಡಿ, ಸೆಪ್ಟಂಬರ್ 21 ರಂದು ಸಂಜೆ ನಮ್ಮ ಸಂಘದ ಆಟೋ ಚಾಲಕ ಮಂಜುನಾಥ ಅವರು ಮೂಡಿಗೆರೆ ಕಡೆಗೆ ಆಟೋದಲ್ಲಿ ಬರುತ್ತಿದ್ದರು. ರೈತಭವನದ ಬಳಿ ರಾಷ್ಟ್ರೀಯ ಹೆದ್ದಾರಿ 173 ರಸ್ತೆಯಲ್ಲಿ ಗುಂಡಿಬಿದ್ದಿರುವ ಪರಿಣಾಮ ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಅಪಘಾತವಾಗಿ ಮೃತಪಟ್ಟಿದ್ದಾರೆ.
ಮೃತ ಮಂಜುನಾಥ ಅವರಿಗೆ ಪತ್ನಿ ಹಾಗೂ ಮಕ್ಕಳಿದ್ದು, ಕುಟುಂಬಕ್ಕೆ ಅವರೇ ಆಧಾರವಾಗಿದ್ದರು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಯ ಪರಿಣಾಮದಿಂದ ಮಂಜುನಾಥ್ ಮೃತರಾಗಿದ್ದು, ಕಡು ಬಡತನದಲ್ಲಿರುವ ಅವರ ಕುಟುಂಬಕ್ಕೆ ಸರಕಾರ 25 ಲಕ್ಷ ರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಯು.ಬಿ.ನಾಗೇಶ್, ಕಾರ್ಯದರ್ಶಿ ನಾಗರಾಜ್. ನಗರ ಅಧ್ಯಕ್ಷ ಗಣೇಶ್ ಬಾಳೇಗದ್ದೆ. ಹನೀಫ್, ಪ್ರಕಾಶ್, ಗಣೇಶ್, ರಾಜಣ್ಣ, ಹರೀಶ್, ತಮ್ಮಣ್ಣ, ಬಿ.ಎಂ.ರವಿ ಮತ್ತಿತರರಿದ್ದರು.



