ಚಿಕ್ಕಮಗಳೂರು ಜಿಲ್ಲೆಗೆ ಸುಮಾರು 12.5 ಕೋಟಿ ರೂ. ವೆಚ್ಚದಲ್ಲಿ 20 ಹೊಸ ಆರೋಗ್ಯ ಕ್ಷೇಮ ಕೇಂದ್ರಗಳು ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಸಹ ನಡೆದಿರುವುದಾಗಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶೃಂಗೇರಿ ತಾಲ್ಲೂಕು ಅಡ್ಡಗದ್ದೆ ಗ್ರಾ.ಪಂ. ವ್ಯಾಪ್ತಿಯ ಬೆಳಂದೂರು ಗ್ರಾಮದ ಹೊನ್ನವಳ್ಳಿಯಲ್ಲಿ ಮಂಗಳವಾರ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೃಂಗೇರಿ ತಾಲ್ಲೂಕಿಗೆ ತೀರಾ ಅಗತ್ಯವಿರುವ ಮಹತ್ವಪೂರ್ಣವಾದ ಯೋಜನೆ ಇದಾಗಿದ್ದು. ಒಟ್ಟು 37.65 ಕೋಟಿ ರೂ. ವೆಚ್ಚದ ಇಲ್ಲಿನ ಉದ್ದೇಶಿತ ಆಸ್ಪತ್ರೆ ಕಟ್ಟಡದ ಕಾಮಗಾರಿಯನ್ನು ಕ್ಷಿಪ್ರಗತಿಯಲ್ಲಿ ನಿರ್ವಹಿಸಿ ಮಳೆ ಬಿಡುವು ನೀಡಿದ ಮುಂದಿನ ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರಲ್ಲದೆ, ಇನ್ನು ಹಲವು ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದರು. ಈಗಾಗಲೇ ಬಾಳೆಹೊನ್ನೂರಿಗೆ 50 ಹಾಸಿಗೆಯ ಆಸ್ಪತ್ರೆ ಕಟ್ಟಡಕ್ಕೆ ಬೇಡಿಕೆ ಬಂದಿದ್ದು, ಈ ತಕ್ಷಣಕ್ಕೆ ಈ ಯೋಜನೆಗೆ ಅವಕಾಶವಾಗದಿದ್ದರೂ ಮುಂದಿನ ಆಯವ್ಯಯದಲ್ಲಿ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇಲ್ಲಿನ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಮೊದಲೇ ಆರಂಭವಾಗಬೇಕಿತ್ತು. ಆದರೆ ಸ್ಥಳದ ಸಮಸ್ಯೆ ಹಾಗೂ ಮಳೆಗಾಲದ ಕಾರಣದಿಂದಾಗಿ ಕಾಮಗಾರಿ ಆರಂಭಕ್ಕೆ ಹಿನ್ನಡೆಯಾಗಿದೆ. ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಮತ್ತು ಬಡಜನತೆಯ ಆರೋಗ್ಯ ರಕ್ಷಣೆಗೆ ಮೂಲ ಸೌಕರ್ಯದ ಅವಶ್ಯಕತೆ ಇದ್ದು, ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಾಗಿದ್ದರೂ ಖಾಸಗಿ ಆಸ್ಪತ್ರೆಗಳು ದುಬಾರಿಯಾಗಿ ಗ್ರಾಮೀಣ ಪ್ರದೇಶದ ಜನರಿಗೆ ತೀರಾ ಸಮಸ್ಯೆಯಾಗುತ್ತಿರುವುದರಿಂದ ಈ ಆಸ್ಪತ್ರೆಯ ಅವಶ್ಯಕತೆ ಇಲ್ಲಿಗೆ ಇತ್ತು. ಈ ನಿಟ್ಟಿನಲ್ಲಿ ಯೋಜನೆ ಕಾರ್ಯಗತವಾಗುವ ಕಾಲ ಸನ್ನಿಹಿತವಾಗಿದೆ ಎಂದರು.
ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆಯನ್ನು ಮಾನ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಅವರು ನೆರವೇರಿಸಿದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಎರಡು ಬಾರಿ ಕಾರ್ಯಕ್ರಮ ನಿಗದಿಯಾಗಿತ್ತು. ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಶಂಕುಸ್ಥಾಪನೆ ನೆರವೇರಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ. ಆಸ್ಪತ್ರೆ ಕಟ್ಟಡಕ್ಕೆ ಸಂಬಂಧಿಸಿದಂತೆ
ಈ ಭಾಗದ ಬಹುದಿನಗಳ ಬೇಡಿಕೆಯಾದ ಒತ್ತುವರಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ. ರಸ್ತೆ ಮಲೆನಾಡಿನಲ್ಲಿ ಬಹಳಷ್ಟು ರಸ್ತೆಗಳು ಗುಂಡಿ ಬಿದ್ದಿವೆ.
ವಸ್ತಾರೆಯಿಂದ ಶೃಂಗೇರಿಗೆ 95 ಕೋಟಿ ರೂ.ಗಳು, ಜಯಪುರದಿಂದ ಕೊಪ್ಪಕ್ಕೆ ರಸ್ತೆ ಅಗಲೀಕರಣವೂ ಸೇರಿದಂತೆ ಗುಂಡಿ ಮುಚ್ಚಲು 11 ಕೋಟಿ ರೂ.ಗಳು, ಕೋರ್ಲುಕೊಪ್ಪದಿಂದ ಕೊಪ್ಪಕ್ಕೆ ಸುಮಾರು 19.5 ಕೋಟಿ ರೂ.ಗಳನ್ನು ಉಸ್ತುವಾರಿ ಸಚಿವರು ಒದಗಿಸಿದ್ದಾರೆ. ಮಳೆ ಮುಗಿದ ಬಳಿಕ ಈ ಕಾಮಗಾರಿ ನಿರ್ವಹಿಸಲಾಗುವುದು. ನೀರು ನುಗ್ಗುತ್ತಿರುವ ಗಾಂಧಿ ಮೈದಾನದಲ್ಲಿ ತಡೆಗೋಡೆ ನಿರ್ಮಿಸಲು ಸಹ ಹಣವನ್ನು ಒದಗಿಸಿದ್ದಾರೆ.
ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಆರೋಗ್ಯ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕಿ ಮಲ್ಲಿಕಾ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್,ಎಸ್,ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್‌ಬಾಬು, ಉಪವಿಭಾಗಾಧಿಕಾರಿ ಸುದರ್ಶನ್ ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು



