ರಾಮ ಹೇಗೆ ಗುಣಗಳ ಗಣಿಯೋ ಹಾಗೇ ಆ ರಾಮನ ವ್ಯಕ್ತಿತ್ವವನ್ನು ಮರೆಯದಂತೆ ನಮ್ಮ ಹೃದಯದಲ್ಲಿ ಅಚ್ಚಾಗುವಂತೆ ಮಾಡಿರುವ ಮಹರ್ಷಿ ವಾಲ್ಮೀಕಿಯವರು ಅಗಣಿತ ಗುಣಗಳ ಗಣಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಮಾಯಣ ಮತ್ತು ಮಹಾಭಾರತ ಭಾರತದ ಚಾರಿತ್ರಿಕ ಮಹಾಕಾವ್ಯಗಳು, ರಾಮನ ವ್ಯಕ್ತಿತ್ವ. ಆದರ್ಶ, ರಾಮಾಯಣದ ಕಾಲಘಟ್ಟವನ್ನು ಸಾವಿರಾರು ವರ್ಷಗಳ ನಂತರವೂ ನಮ್ಮ ಹೃದಯದಲ್ಲಿ ಉಳಿಯಲು ಮಹರ್ಷಿ ವಾಲ್ಮೀಕಿಯವರು ಕಾರಣೀಭೂತರಾಗಿದ್ದಾರೆ ಎಂದರು.
ಮಹರ್ಷಿ ವಾಲ್ಮೀಕಿ ಅವರು ತಮ್ಮ ಕಾವ್ಯದ ಮೂಲಕ ಸಾಮರಸ್ಯ, ಪ್ರೀತಿ, ತ್ಯಾಗ ಮತ್ತು ಅಭಿವೃದ್ಧಿ ಆಧಾರಿತ ಆಡಳಿತವನ್ನು ಪ್ರಪಂಚದಾದ್ಯಂತ ಹರಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದ ಅವರು, ಪ್ರತಿಭೆ ಹುಟ್ಟಿನ ಉಡುಗೊರೆ ಅಲ್ಲ, ಸಾಧನೆಯ ಗಳಿಕೆ ಎನ್ನುವುದನ್ನು ರಾಮಾಯಣ ಮಹಾಕಾವ್ಯ ಬರೆದು ತೋರಿಸಿದ ದಲಿತ ಪ್ರತಿಭೆ, ಆದಿ ಕವಿ ವಾಲ್ಮೀಕಿಯವರ ಬದುಕು ಮತ್ತು ಸಾಧನೆ ನಮಗೆಲ್ಲ ಪ್ರೇರಣೆಯಾಗಬೇಕು. ಕಟ್ಟುಕತೆಗಳಿಂದ ಹುಟ್ಟಿಕೊಂಡಿರುವ ಪೂರ್ವಗ್ರಹಗಳನ್ನು ಪಕ್ಕಕ್ಕಿಟ್ಟು ಈ ಸಾಧಕನ ನೈಜ ಜೀವನಗಾಥೆಯ ಅಧ್ಯಯನ ತಳ ಸಮುದಾಯಗಳ ಕೋಟ್ಯಂತರ ಪ್ರತಿಭೆಗಳಿಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸವನ್ನು ಹುಟ್ಟಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಒಬ್ಬ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿಯವರು. ಅವರನ್ನು ಅತ್ಯಂತ ಗೌರವದಿಂದ ಆದಿಕವಿ ಎನ್ನಲಾಗುತ್ತದೆ. ದೇಶದಲ್ಲಿ ರಾಮಾಯಣ, ಮಹಾಭಾರತ ಎಲ್ಲರ ಬದುಕಿಗೆ ಆದರ್ಶದ ಮಹಾ ಕಾವ್ಯಗಳಾಗಿವೆ. ರಾಮಾಯಣ ರಚಿಸಿದ್ದು ವಾಲ್ಮೀಕಿಯಾದರೆ, ಮಹಾಭಾರತ ರಚಿಸಿದ್ದು ವೇದ ವ್ಯಾಸರು. ಈ ಮಹಾನ್ ಗ್ರಂಥಗಳನ್ನು ರಚಿಸಿದ ಇವರಿಬ್ಬರೂ ಶೋಷಿತ ವರ್ಗದಿಂದ ಬಂದವರು ಎಂಬುದು ಹೆಮ್ಮೆಯ ವಿಷಯ ಎಂದರು.
ಸರ್ಕಾರ ಹಲವಾರು ಯೋಜನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುತ್ತಿದೆ. ಸಕಾಲದಲ್ಲಿ ಕೆಲವೊಂದು ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ ಅವರು, ವಾಲ್ಮೀಕಿ ಭವನಕ್ಕೆ ಪೀಠೋಪಕರಣಗಳನ್ನು ಒದಗಿಸಲು 10 ಲಕ್ಷ ರೂ.ಗಳನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರು.
ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಪತಿ ಹಳಗುಂದ ಮಹರ್ಷಿ ವಾಲ್ಮೀಕಿರವರ ಕುರಿತು ಉಪನ್ಯಾಸ ನೀಡಿ, ರಾಮಾಯಣ ಎಂದರೆ ವಾಲ್ಮೀಕಿ ನೆನಪಾಗುವುದು ಸಹಜ. ವಾಲ್ಮೀಕಿ ಕೆತ್ತಿದ ನೂರಾರು ಪಾತ್ರಗಳಿಗೆ ದೇವರ ಮಂದಿರವಿದೆ. ಗುಡಿ ಗೋಪುರಗಳಿವೆ. ಆದರೆ ವಾಲ್ಮೀಕಿಗೆ ಮಾತ್ರ ದೇವಾಲಯವಿಲ್ಲ. ಆತ ಕೆತ್ತಿದ ರಾಮ ದೇವನಾದ, ವಾಲ್ಮೀಕಿ ಮಹಾನ್ ದೇವನಾಗಿ ಇವತ್ತು ನಮ್ಮ ಮುಂದೆಯಿದ್ದಾರೆ ಎಂದ ಅವರು ರಾಮ ನಿಮ್ಮ ಪಾಲಿಗೆ ಋಷಿಯಾಗಿರಬಹುದು,ವಾಲ್ಮೀಕಿ ಮಾಹನ್ ಋಷಿ, ಮಹರ್ಷಿಯಾಗಿದ್ದಾನೆ ಎಂದು ಹೇಳಿದರು. ವಾಲ್ಮೀಕಿಯವರು ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ. ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗಿದೆ ಎಂದು ಹೇಳಿದರು.
ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರನೆಂಬ ಒಬ್ಬ ಬೇಡನಾಗಿದ್ದ. ನಾರದ ಮುನಿಯ ಪ್ರೇರಣೆಯಿಂದ ರಾಮ ಭಕ್ತನಾಗಿ, ರಾಮಾಯಣ ರಚಿಸಿದ ಮೊದಲ ಕವಿಯಾಗಿ ಪ್ರಸಿದ್ಧರಾದರು. ಸಂಸ್ಕೃತ ಸಾಹಿತ್ಯದಲ್ಲಿ ಅವರ ಮಹತ್ವವನ್ನು, ಅವರು ರಚಿಸಿದ ರಾಮಾಯಣದ ಶ್ರೇಷ್ಠತೆಯನ್ನು ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಎತ್ತಿ ತೋರಿಸಲಾಗಿದೆ.
ಒಮ್ಮೆ ಜೋಡಿ ಕ್ರೌಂಚ ಪಕ್ಷಿಗಳನ್ನು ನೋಡುತ್ತಿದ್ದಾಗ, ಬೇಟೆಗಾರನೊಬ್ಬ ಒಂದು ಹಕ್ಕಿಯನ್ನು ಕೊಂದಾಗ, ವಾಲ್ಮೀಕಿ ಕೋಪಗೊಂಡು ಬೇಟೆಗಾರನಿಗೆ ಶಾಪ ನೀಡುತ್ತಾನೆ. ಇದರಿಂದಾಗಿ ಅವರೊಳಗಿನ ಕವಿತಾ ಪ್ರತಿಭೆ ಹೊರಹೊಮ್ಮುತ್ತದೆ, ಇದು ರಾಮಾಯಣ ಬರೆಯಲು ಸ್ಫೂರ್ತಿ ನೀಡುತ್ತದೆ. ಮಹರ್ಷಿ ವಾಲ್ಮೀಕಿಯನ್ನು ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎಂದು ಕೂಡ ಹೇಳಲಾಗುತ್ತದೆ ಮತ್ತು ಅವರು ರಚಿಸಿದ ರಾಮಾಯಣವು ಸಂಸ್ಕೃತದ ಮೊದಲ ಮಹಾಕಾವ್ಯವಾಗಿದೆ. ವಾಲ್ಮೀಕಿ ಜಯಂತಿಯನ್ನು ಆಚರಿಸುವ ಸಂಭ್ರಮದಲ್ಲಿ ನಾವು ಅವರ ಜೀವನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗ ಅನುಸರಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪದವಿ ಸೇರಿದಂತೆ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಧನ ನೀಡುವ ಮೂಲಕ ಸನ್ಮಾನಿಸಲಾಯಿತು.
ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಬಿ.ಕೆ.ಭೀಮಪ್ಪ, ಜಿಲ್ಲಾ ವಾಲ್ಮೀಕಿ ಯುವಕ ಸಂಘದ ಜಗದೀಶ್ ಕೋಟೆ, ಜಿ.ಪಂ. ಉಪಕಾರ್ಯದರ್ಶಿ ಶಂಕರ್ ಕೊರವರ, ತಾಲ್ಲೂಕು ತಹಸೀಲ್ದಾರ್ ರೇಷ್ಮಾಶೆಟ್ಟಿ, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ವಾಲ್ಮೀಕಿ ಸಂಘದ ಉಪಕಾರ್ಯದರ್ಶಿ ಮಧುಕುಮಾರ್, ಐ ಟಿ ಡಿ ಪಿ ಜಿಲ್ಲಾ ಅಧಿಕಾರಿ ರಮೇಶ್ ಸ್ವಾಗತಿಸಿದರು. ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಮುನ್ನ ನಗರದ ತಾಲ್ಲೂಕು ಕಚೇರಿಯಿಂದ ಕಲಾಮಂದಿರದವರೆಗೆ ಮೆರವಣಿಗೆ ಗಮನ ಸೆಳೆಯಿತು.



