ಶ್ರೀ ಕ್ಷೇತ್ರ ಧರ್ಮಸ್ಥಳ ಜನ ಜಾಗೃತಿ ವೇದಿಕೆ ವತಿಯಿಂದ ಶ್ರೀ ಗಾಂಧಿ ಜಯಂತಿಯ ಪ್ರಯುಕ್ತ ಚಿಕ್ಕಮಗಳೂರು ತಾಲೂಕು ಸಂಗಮೇಶ್ವರ ಪೇಟೆಯಲ್ಲಿ ಬೃಹತ್ ಜಾಥಾ ಹಾಗೂ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರಾದ ಟಿ.ಡಿ.ರಾಜೆಗೌಡರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಯಾವ ಸರಕಾರಗಳು ಮಾಡದಂತಹ ಕೆಲಸಗಳನ್ನು ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಅಮ್ಮನವರು ಮಾಡುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ ಎಲ್ಲಾ ರಂಗದಲ್ಲೂ ಮಹಿಳೆಯರ ಅಭಿವೃದ್ಧಿ ಸಾಕಷ್ಟು ಕಂಡಿದೆ. ಲಕ್ಷಾಂತರ ಕುಟುಂಬಗಳು ಒಳಿತನ್ನು ಕಂಡಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ದಿಕ್ಸೂಚಿ ಭಾಷಣ ಮಾಡಿದ ಜನ ಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಪ್ರಶಾಂತ್ ಚಿಪ್ರಗುತ್ತಿರುವವರು ಮಾತನಾಡಿ ಮಹಾತ್ಮ ಗಾಂಧೀಜಿ ಅವರ ಆದರ್ಶವನ್ನು ನಾವು ಪಾಲಿಸಲು ಪ್ರಯತ್ನಿಸಿ ನಂತರ ಗಾಂಧಿ ಜಯಂತಿ ಮಾಡುವುದರಲ್ಲಿ ಸಾರ್ಥಕತೆ ಇರುತ್ತದೆ. ಗಾಂಧೀಜಿಯವರು ಅಂದುಕೊಂಡಂತೆ ಮದ್ಯಮುಕ್ತ ದೇಶವನ್ನು ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮದ್ಯಪಾನವನ್ನು ನಿಷೇಧ ಮಾಡಿ ನಂತರ ಗಾಂಧಿ ಜಯಂತಿಯನ್ನು ಆಚರಣೆ ಮಾಡಿದರೆ ಅದಕ್ಕೆ ಇನ್ನೂ ಹೆಚ್ಚಿನ ಅರ್ಥ ಬರುತ್ತದೆ ಹಾಗೂ ಗಾಂಧಿ ಜಯಂತಿ ಮಾಡಲು ನಮಗೆ ನೈತಿಕತೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಹಿಂಸೆಯಿಂದ ಆಗುತ್ತಿರುವ ಅಶಾಂತಿಯ ಬದುಕಿಗೆ ಗಾಂಧೀಜಿಯವರ ಅಹಿಂಸಾ ವಾದ ಶಾಂತಿಯನ್ನು ತರಬಹುದೆಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಯೋಜನಾಧಿಕಾರಿ ಸುಧೀರ್ ರವರು ಗ್ರಾಮ ಅಭಿವೃದ್ಧಿ ಯೋಜನೆಯ ಉಪಯೋಗಗಳ ಬಗ್ಗೆ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಶ್ರೀ ಹೆಗ್ಗಡೆಯವರು ಮಾಡಿರುವ ಸಮಾಜಮುಖಿ ಕೆಲಸಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕೆ.ಎಸ್. ಗಣೇಶ್ ರವರು ಮಾತನಾಡಿ ಮದ್ಯಪಾನ ತ್ಯಜಿಸಿ ಹೊಸ ಜೀವನಕ್ಕೆ ಕಾಲಿಟ್ಟ ನವ ಜೀವನ ಸಮಿತಿ ಸದಸ್ಯರಿಗೆ ಶುಭ ಹಾರೈಸಿದರು.
.ಕಾರ್ಯಕ್ರಮದಲ್ಲಿ ಉಜ್ಜಯಿನಿ ಕ್ಷೇತ್ರದ ಧರ್ಮದರ್ಶಿಗಳಾದ ಗೋಪಾಲಗೌಡರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಕವಿತಾ ಲಿಂಗರಾಜು, ರತ್ನಾಕರ, ಗ್ರಾಮ ಪಂಚಾಯತಿ ಅಧ್ಯಕ್ಷರಾದ,ಸಂಪತ್, ಚಂದ್ರೇಗೌಡರು ಚಂದ್ರಶೇಖರ್ ರೈ ಹಾಗೂ ಇತರರು ಇದ್ದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಬಾರಿ ವಿಜೃಂಭಣೆಯಿಂದ ನೆರವೇರಿದವು.



