ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
2025ರ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಗಳ ಅಂತರದಲ್ಲಿ ಮಣಿಸಿ ಭರ್ಜರಿ ಜಯ ದಾಖಲಿಸಿತು.
ಭಾರತ ನೀಡಿದ್ದ 299 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ನಲ್ಲಿ 246 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 52 ರನ್ ಗಳ ಅಂತರದಲ್ಲಿ ಭಾರತದ ಎದುರು ಮಂಡಿಯೂರಿತು.
ಮೊದಲು ಬ್ಯಾಟ್ ಬೀಸಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. ಕಠಿಣ ಗುರಿಯನ್ನು ಬೆನ್ನೆಟ್ಟಿದ ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗಳಿಸಿ ಆಲೌಟ್ ಆಯ್ತು
ದಕ್ಷಿಣಾ ಆಫ್ರಿಕಾದ ಆರಂಭಿಕ ಆಟಗಾರ್ತಿ ತಜ್ಮಿನ್ ಬ್ರಿಟ್ಸ್ 23 ರನ್ ಗಳಿಸಿ ರನೌಟ್‌ಗೆ ಬಲಿಯಾದರೆ ಅನ್ನೆಕೆ ಬಾಷ್ ಶೂನ್ಯಕ್ಕೆ ಔಟಾದಾಗ ಪಂದ್ಯ ಭಾರತದ ಕಡೆ ತಿರುಗಿತ್ತು. ಆದರೆ ಎರಡನೇ ವಿಕೆಟಿಗೆ ಲಾರಾ ವೊಲ್ವಾರ್ಡ್ಟ್ ಮತ್ತು ಸುನೆ ಲೂಸ್ 51 ಎಸೆತಗಳಲ್ಲಿ 52 ರನ್ ಜೊತೆಯಾಟವಾಡಿದರು. ಇವರಿಬ್ಬರು ಗಟ್ಟಿಯಾಗಿ ನಿಲ್ಲುತ್ತಿದ್ದಂತೆ ನಾಯಕಿ ಹರ್ಮನ್ ಶಫಾಲಿ ವರ್ಮಾ ಕೈಯಲ್ಲಿ ಬಾಲ್ ನೀಡಿದರು.
ಈ ಪ್ರಯೋಗ ಯಶಸ್ವಿ ಎಂಬಂತೆ 25 ರನ್ ಗಳಿಸಿದ್ದ ಸುನೆ ಲೂಸ್ ಶಫಾಲಿ ಕೈಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಮರಿಝನ್ನೆ ಕಪ್ 4 ರನ್ ಗಳಿಸಿ ಶಫಾಲಿ ಬೌಲಿಂಗ್‌ನಲ್ಲಿ ಕೀಪರ್ ರಿಚಾ ಘೋಷ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ನಾಯಕಿ ಲಾರಾ ವೊಲ್ವಾರ್ಡ್ಟ್ ಶತಕ ಸಿಡಿಸಿ ಹೋರಾಡುವ ಮುನ್ಸೂಚನೆ ನೀಡಿದರು. ಆದರೆ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಅಮನ್‌ಜೋತ್ ಕೌರ್ ಹಿಡಿದ ಕ್ಯಾಚ್‌ಗೆ 101 (98 ಎಸೆತ,11 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟಾದರು.
ವೊಲ್ವಾರ್ಡ್ಟ್ ಔಟಾದಂತೆ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಕಮಾಲ್ ಮಾಡಿದರು. ಒಟ್ಟು ಐದು ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಟ್ಟರು.
ನಾಡಿನ್ ಡಿ ಕ್ಲಾರ್ಕ್ ಅವರ ಕ್ಯಾಚನ್ನು ಹರ್ಮನ್ ಪಡೆಯುತ್ತಿದ್ದಂತೆ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಿಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಶಫಾಲಿ ಮತ್ತು ಮಂದಾನ ಶತಕದ ಜೊತೆಯಾಟ ಆಡಿದರು. ಶಫಾಲಿ, ದೀಪ್ತಿ ಶರ್ಮ ಅರ್ಧ ಶತಕ ಸಿಡಿಸಿದರು. ಮಂದಾನ, ನಾಯಕಿ ಕೌರ್, ಜೆಮಿಮಾ, ರಿಚಾ ಘೋಷ್ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಭಾರತ 298 ರನ್ ಗಳಿಸಿ ದೊಡ್ಡ ಸವಾಲು ಒಡ್ಡಿತು.
ಇದು ಭಾರತದ ಮಹಿಳಾ ತಂಡಕ್ಕೆ ಚೊಚ್ಚಲ ಏಕದಿನ ಕ್ರಿಕೆಟ್ ಕಿರೀಟವಾಗಿದೆ. ಇದಕ್ಕು ಮುನ್ನ ಎರಡು ಬಾರಿ ಫೈನಲ್ ಪ್ರವೇಶಿದ್ದರು ಟ್ರೋಪಿ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ.
1973 ರಿಂದಾ ಇದುವರೆಗೆ ಆಸ್ಟ್ರೇಲಿಯಾ ಮಹಿಳಾ ತಂಡ 7 ಬಾರಿ, ಇಂಗ್ಲೇಡ್ ತಂಡ 4 ಬಾರಿ, ನ್ಯೂಜಿಲೆಂಡ್ ತಂಡ 1 ಬಾರಿ ಛಾಂಪಿಯನ್ ಆಗಿದ್ದವು. ಇದೀಗ ಆ ಪಟ್ಟಿಗೆ ಭಾರತ ತಂಡ ಸೇರ್ಪಡೆಯಾಗಿದೆ.
ಅರ್ಧ ಶತಕದೊಂದಿಗೆ 2 ವಿಕೆಟ್ ಪಡೆದು ಮಿಂಚಿನ ಶಪಾಲಿ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯುದ್ದಕ್ಕೂ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ದೀಪ್ತಿ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.



