oplus_1024
ಮಹಿಳೆಯರು ಉದ್ಯಮಶೀಲತೆ ಬೆಳೆಸಿಕೊಂಡರೆ ಅದು ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ, ಕಾಫಿ ಉದ್ದಿಮೆಯಲ್ಲಿ ಮಹಿಳೆಯರು ತೊಡಗಿಸಿಕೊಂಡು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಕಷ್ಟು ಅವಕಾಶಗಳು ಇವೆ ಎಂದು ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವರುಂದ ತಿಳಿಸಿದರು.
ಅವರು ಶುಕ್ರವಾರ ಮೂಡಿಗೆರೆ ಬೆಳೆಗಾರರ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಚಿಕ್ಕಮಗಳೂರು ವುವೆನ್ಸ್ ಕಾಫಿ ಫೋರಂ’ ಪ್ರಾರಂಭೋತ್ಸವದಲ್ಲಿ ಸಂಘಟನೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು.

ಭಾರತದ ಕಾಫಿಗೆ ವಿಶ್ವಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಆದರೆ ನಾವು ನಮ್ಮ ದೇಶದ ಕಾಫಿಯನ್ನು ಬ್ರಾಂಡ್ ಮಾಡುವುದರಲ್ಲಿ ಸಫಲರಾಗಿಲ್ಲ. ಈ ನಿಟ್ಟಿನಲ್ಲಿ ಕಾಫಿ ಮಂಡಳಿ ಕಾರ್ಯಪ್ರವೃತ್ತವಾಗಿದ್ದು, ನಮ್ಮ ದೇಶದ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಮಾಡಿ ಆ ಮೂಲಕ ಬೆಳೆಗಾರರಿಗೆ ಮತ್ತು ಉದ್ದಿಮೆದಾರರಿಗೆ ಉತ್ತಮ ಬೆಲೆ ದೊರಕುವಂತೆ ಮಾಡಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಭಾರತದ ಕಾಫಿ ಉತ್ಪಾದನೆಯನ್ನು 7 ಲಕ್ಷ ಟನ್ ಗೆ ತಲುಪಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಕಾಫಿ ಬೆಳೆಯ ತಳಿ ಅಭಿವೃದ್ಧಿ, ಹೊಸ ತಂತ್ರಜ್ಞಾನ, ತರಬೇತಿ ನೀಡಲಾಗುತ್ತಿದೆ ಎಂದರು. ಕಾಫಿ ಮಂಡಳಿಯಿಂದ ದೇಶದಾದ್ಯಂತ 10 ಸಾವಿರ ಕಾಫಿ ಔಟ್ಲೆಟ್ ಗಳನ್ನು ತೆರೆಯುವ ಚಿಂತನೆ ನಡೆಸಲಾಗುತ್ತಿದೆ. ಇದರಿಂದ ದೇಶದಲ್ಲಿ ಕಾಫಿಯ ಆಂತರಿಕ ಬಳಕೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಮಹಿಳೆಯರೇ ಸೇರಿ ರೈತ ಉತ್ಪಾದಕ ಸಂಸ್ಥೆಗಳನ್ನು ಕಟ್ಟಿ ಆ ಮೂಲಕ ಕಾಫಿ ಉದ್ದಿಮೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಬಹಳಷ್ಟು ಅವಕಾಶಗಳು ಇವೆ. ಇದನ್ನು ಮಹಿಳಾ ಸಂಘಟನೆಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ ; ಮಲೆನಾಡಿನಲ್ಲಿ ಕಾಫಿ ತೋಟಗಳ ನಿರ್ವಹಣೆ ಮತ್ತು ವಿಶಿಷ್ಟವಾದ ಕಾಫಿ ಸಂಸ್ಕೃತಿಯನ್ನು ಕಟ್ಟಿ ಬೆಳೆಸುವುದರಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದೆ. ಅನೇಕ ಕಡೆ ಮಹಿಳೆಯರೇ ಸ್ವತಃ ಕಾಫಿ ತೋಟಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಉತ್ತಮ ಕಾಫಿ ಮಾಡುವುದು ಒಂದು ಕಲೆ, ಇದರ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ತರಬೇತಿ ನೀಡುವ ಅವಶ್ಯಕತೆ ಇದೆ. ಈಗ ಕಾಫಿಗೆ ಉತ್ತಮ ಬೆಲೆ ಬಂದಿದ್ದು, ಬೆಳೆಗಾರರು ಇದರ ಸದುಪಯೋಗಪಡಿಸಿಕೊಂಡು ಸಮಸ್ಯೆಗಳಿಂದ ಮತ್ತು ಸಾಲದಿಂದ ಹೊರಬರುವ ಪ್ರಯತ್ನ ಮಾಡಬೇಕು, ಇದಕ್ಕೆ ಮಹಿಳೆಯರು ಉತ್ತೇಜನ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕೆಜಿಎಫ್ ಗೌರವ ಕಾರ್ಯದರ್ಶಿ ಸುರೇಂದ್ರ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಮನೋಹರ್, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ, ಚಿಕ್ಕಮಗಳೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್, ಚಿಕ್ಕಮಗಳೂರು ವುಮೆನ್ಸ್ ಕಾಫಿ ಫೋರಂ ಗೌರವಾಧ್ಯಕ್ಷೆ ಪಲ್ಲವಿ ಸಿ.ಟಿ.ರವಿ ಮಾತನಾಡಿದರು.
ಚಿಕ್ಕಮಗಳೂರು ವುಮೆನ್ಸ್ ಕಾಫಿ ಫೋರಂ ಅಧ್ಯಕ್ಷೆ ಪವಿತ್ರಾ ರತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ರಮ್ಯಾ ಸಂದೇಶ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ರೇಷ್ಮಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು, ಶಾಲಿನಿ ಪಾಟೀಲ್ ವೇದಿಕೆಗೆ ಆಹ್ವಾನಿಸಿದರು, ಸ್ಮಿತಾ ಸುನಿಲ್ ಸ್ವಾಗತಿಸಿದರು, ಸಮ್ಯ ದಯಾನಂದ್ ಪ್ರಾರ್ಥನೆ ನೆರವೇರಿಸಿದರು.
ಚಿಕ್ಕಮಗಳೂರು ವುಮೆನ್ಸ್ ಕಾಫಿ ಫೋರಂ ಪದಾಧಿಕಾರಿಗಳು
ಅಧ್ಯಕ್ಷರು : ಪವಿತ್ರ ರತೀಶ್ ಹಳೇಕೋಟೆ
ಗೌರವ ಅಧ್ಯಕ್ಷರು :ಪಲ್ಲವಿ ರವಿ
ಉಪಾಧ್ಯಕ್ಷರು :ಕವಿತ ಲಿಂಗರಾಜು
ಕಾರ್ಯದರ್ಶಿ:ರಮ್ಯ ಸಂದೇಶ್
ಸಹ ಕಾರ್ಯದರ್ಶಿ:ಶಾಲಿನಿ ಪಾಟೀಲ್
ಸಂಚಾಲಕರು :ರೇಷ್ಮಾ ಸುಧೀರ್ ದಾರದಹಳ್ಳಿ
ಖಜಾಂಚಿ :ಸ್ಮಿತಾಸುನಿಲ್.
ಪದಾಧಿಕಾರಿಗಳು :
ದೀಪ್ತಿರಮೇಶ್
ಪದ್ಮಿನಿ ಚಂದ್ರೆಗೌಡ
ರೂಪ ತಾರಾನಾಥ್
ಸುಧಾ ರಮೇಶ್
ಮೈನಾ ಕೃಷ್ಣೆಗೌಡ
ಕವಿತಾ ಕೇಶವ್
ಸ್ಮಿತಾ ಸುರೇಶ್
ವೇದಾಸತೀಶ್
ಪಾವನ ಅನೂಪ್




