ಸೌದಿಅರೇಬಿಯಾದ ಮೆಕ್ಕಾದಿಂದ ಮದೀನಾಗೆ ಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಸುಮಾರು 45 ಮಂದಿ ಭಾರತೀಯ ಯಾತ್ರಿಕರು ಸಾವನ್ನಪ್ಪಿರುವ ದುರಂತವೊಂದು ಸೋಮವಾರ ಸಂಭವಿಸಿದೆ.
ಸೋಮವಾರ ಬೆಳಗಿನ ಜಾವ ಮೆಕ್ಕಾದಿಂದ ಮದೀನಾಗೆ ಭಕ್ತರನ್ನು ಕರೆದೊಯ್ಯಲಾಗುತ್ತಿತ್ತು. ದುರಂತದ ಸಮಯದಲ್ಲಿ ಸುಮಾರು 20 ಮಹಿಳೆಯರು ಮತ್ತು 11 ಮಕ್ಕಳು ಸೇರಿದಂತೆ 46 ಬಸ್ಸಿನಲ್ಲಿದ್ದರು ಎನ್ನಲಾಗಿದೆ.
ಈ ವೇಳೆ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಬಸ್ಸಿನಲ್ಲಿದ್ದ 45 ಭಾರತೀಯ ಉಮ್ರಾ ಯಾತ್ರಿಕರು ಸಜೀವ ದಹನವಾಗಿದ್ದಾರೆಂದು ತಿಳಿದುಬಂದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಮುಫ್ರಿಹತ್ ಎಂದು ಗುರುತಿಸಲಾದ ಸ್ಥಳದಲ್ಲಿ ಭಾರತೀಯ ಕಾಲಮಾನ ಬೆಳಗಿನ ಜಾವ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಘಟನೆಯಲ್ಲಿ ಓರ್ವ ಯುವಕ ಮಾತ್ರ ಬದುಕುಳಿದಿದ್ದು, ಆತನನ್ನು 25 ವರ್ಷದ ಅಬ್ದುಲ್ ಶುಹೈಬ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಯಾತ್ರಿಕರೆಲ್ಲರೂ ನಿದ್ರೆಯಲ್ಲಿದ್ದದ್ದರಿಂದ ಭಾರೀ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಯಾತ್ರಿಕರಿಗೆ ಉಮ್ರಾ ವೀಸಾ ಮತ್ತು ಪ್ರಯಾಣದ ವ್ಯವಸ್ಥೆ ಮಾಡಿದ್ದ ಏಜೆನ್ಸಿಗಳು ಮುಂದಿನ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಜ್ ಮತ್ತು ಉಮ್ರಾ ಸಚಿವಾಲಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಸಂತಾಪ
ಮೃತರೆಲ್ಲರೂ ಹೈದರಾಬಾದ್ ಮೂಲದವರೆಂದು ಹೇಳಲಾಗುತ್ತಿದ್ದು, ಘಟನೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



