ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕøತ ಉಪನ್ಯಾಸಕರು,
ಮೈಸೂರು.
ಮೊ. 9448233119
ಸಂಸ್ಕøತ ಉಪನ್ಯಾಸಕರು,
ಮೈಸೂರು.
ಮೊ. 9448233119

ಜೀವನ ಎನ್ನುವುದು ಸುಲಭವಾಗಿ ಚಪ್ಪರಿಸಿ ಕುಡಿಯುವಂತಹ ಮಾವಿನ ರಸವಲ್ಲ, ಬದಲಿಗೆ ಇದು ಕಷÀ್ಟಪಟ್ಟು ತನ್ನನ್ನು ತಾನು ತೇದುಕೊಂಡು ಸವಿಯುನಿಸುವ ಕಬ್ಬಿನ ರಸ..
ಮಾವು ಹಣ್ಣುಗಳ ರಾಜನೇನೋ ಸರಿ, ಇದರ ರಸಾಯನದ ಸವಿಯನ್ನು ಉಂಡು ಸಂಭ್ರಮಿಸುವುದು ಕಷ್ಟದ ಕೆಲಸವೇನಲ್ಲ. ಮೇಲಿನ ಮೃದುವಾದ ಸಿಪ್ಪೆಯನ್ನು ತೆಗೆದೊಡನೆ (ಒಂದೊಮ್ಮೆ ಅದರ ಸಮೇತವಾಗಿ ಸಹ) ಅದರ ರಸವನ್ನು ಚಪ್ಪರಿಸಲು ತಡವೇ ಇಲ್ಲ. ಆದರೆ ಕಬ್ಬು ಹಾಗಲ್ಲ ಹೊರಟಾದ ತೊಗಟೆಯನ್ನು ಕಷ್ಟಪಟ್ಟು ಜಜ್ಜಿದಾಗ ಮಾತ್ರವೇ ಸವಿಯಾದ ರಸವನ್ನು ಸವಿಯಲು ಸಾಧ್ಯ. ಈ ಜೀವನವು ಸಹ ನಾವು ಅಂದುಕೊಳ್ಳುವಷ್ಟು ಸರಳವಲ್ಲ ಅದರ ಏರಿಳಿತದೊಂದಿಗೆ ನಮ್ಮನ್ನು ನಾವು ಹೊಂದಿಸಿಕೊಂಡು ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಿದಾಗ ಮಾತ್ರ ನಮಗೆ ಅದರಿಂದ ಸಿಗುವ ಒಳ್ಳೆಯ ಪ್ರತಿಫಲವು ಕಬ್ಬಿನ ರಸದಷ್ಟು ಸವಿ.
ಜೀವನದಲ್ಲಿ ಏಳು ಬೀಳುಗಳು ರಾತ್ರಿ ಹಗಲಿನಂತೆ ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ. ರಾತ್ರಿ ಆಯ್ತಲ್ಲ ಎಂದು ಭೂಮಿ ಅಂಜುವುದಿಲ್ಲ, ಬೆಳಗಾಯಿತು ಹಗಲಿನಲ್ಲಿ ನಾನು ಸುಂದರವಾಗಿ ಕಾಣಬಲ್ಲೆ ಎಂದಾಗಲಿ, ಲೋಕದ ಜನ ಮಾನಸಕ್ಕೆ ಬೆಳಕಾಗಬಲ್ಲೆ ಎಂದು ಬೀಗುವಂತೆಯೂ ಇಲ್ಲ. ಏಕೆಂದರೆ ಹಗಲಿನ ಶ್ರಮದಾಯಕ ಕೆಲಸದಿಂದ ದಣಿದ ಜೀವಿಗಳಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಿ ಮರು ಬೆಳಗಿಗೆ ಉತ್ಸಾಹ ತುಂಬಬಲ್ಲ ಚೈತನ್ಯವನ್ನು ತನ್ನೊಳಗೆ ಅಡಗಿಸಿಕೊಂಡಿರುವ ರಾತ್ರಿ ಕಣ್ಣಿಗೆ ಕಾಣಿಸದೆ ಅಡಗಿಕೊಂಡಿರುವ ಚೆಲುವೆ. ಹಾಗಂತ ನಾವು ರಾತ್ರಿ ಹೆಚ್ಚು ಹಗಲು ಕಮ್ಮಿ ಎಂದು ಹೇಳುವುದು ಖಂಡಿತ ಸಲ್ಲದು.
ಇದೇ ರೀತಿ ಮನುಜನ ಜೀವನದ ನೆರಳು ಬೆಳಕಿನಾಟ ನಿಷೆಯನ್ನು ನಾವು ದುಃಖವೆಂದು ತಿಳಿದುಕೊಂಡು ಈ ನಿಷೆ ಕಳೆದಾಗ ಉಷೆಯ ಆಗಮನ ನಿಶ್ಚಯ ಎಂಬ ಭರವಸೆಯೇ ಬದುಕು, ಈ ಭರವಸೆಯು ಪ್ರತಿದಿನವೂ ಸತ್ಯ, ದಿನಕ್ಕೂ ಗಟ್ಟಿ. ಈ ಭರವಸೆ ಕುಸಿದಾಗ ನೋವು ಹತಾಶೆ. ಹಾಗಂತ ಬರಿ ಭರವಸೆ ಜೀವನವು ಸಹ ಅಲ್ಲ. ಬದುಕಿನ ವಾಸ್ತವತೆಯನ್ನು ಅರಿತುಕೊಂಡಾಗ ಮಾತ್ರ ಅದರ ಅಂತರಂಗದ ಅರಿವಾಗುತ್ತದೆ. ಈ ಅಂತರಂಗದ ಅರಿವಿಗೆ ನಮಗೆ ಬೇಕಾಗಿರುವುದು ಸಮತೆ. ಸಮತ್ವದ ಭಾವವನ್ನು ನಮ್ಮೊಳಗೆ ನಾವು ಬೆಳೆಸಿಕೊಂಡಾಗ ಮಾತ್ರ ಬದುಕಿನ ಏರಿಳಿತವನ್ನು ಒಂದೇ ಸಮನಾಗಿ ನೋಡಬಲ್ಲ ಮನಸ್ಥಿತಿಯು ಬರಬಲ್ಲದು. ಈ ಮನಸ್ಥಿತಿಯನ್ನು ಹೊಂದಬೇಕಾದರೆ ಮನುಷÀ್ಯ ಹೇಗೆ ಇರಬೇಕು ಎಂಬುದನ್ನು ಮಾನ್ಯ ಡಿವಿಜಿಯವರು ಹೀಗೆ ಹೇಳಿದ್ದಾರೆ.
ಗೋಳಾಡಲು ಬೇಡ ಲೋಲಾಪ್ತಿಯುಂ ಬೇಡ |
ಬಾಳು ಪರಚೇತನದ ಕೇಳಿಯೆಂದೆಣಿಸಿ ||
ಪಾಲಿಗನು ನೀನದರೊಳೆನಿಪಂತೆ ಬಾಳುತಿರು |
ಕೇಳಿಯು ಧರ್ಮವೆಲೊ ಮಂಕುತಿಮ್ಮ ||
ಬದುಕಿನ ದುಃಖಕ್ಕಾಗಿ ಗೋಳಾಟವೂ ಬೇಡ, ಸುಖಕ್ಕಾಗಿ ಲೋಲಾಪ್ತಿಯೂ ಬೇಡ, ಈ ಬಾಳು ಒಂದು ಪರಚೈತನ್ಯದ ಆಟ ಎಂದುಕೊಂಡು ಒಂದು ಮಧ್ಯದ ಗತಿಯನ್ನು ಅನುಸರಿಸಿಕೊಂಡು ಅದರಲ್ಲಿ ನೀನು ಜೀವನ ಸಾಗಿಸಿದರೆ ಈ ಬಾಳಿನಾಟ ಒಂದು ಧರ್ಮವೇ ಹೌದು.
ಜೀವನದಲ್ಲಿ ಬರುವ ದುಃಖವಾಗಲೀ ಸುಖವಾಗಲೀ ತಾತ್ಕಾಲಿಕ, ಯಾವುದೂ ಸಹ ಶಾಶ್ವತವಲ್ಲ. ಇದೊಂದು ಹಗಲು ರಾತ್ರಿಯ ದಿನಚರಿ, ಆದ್ದರಿಂದ ಇಲ್ಲಿ ಮನುಷÀ್ಯ ತನ್ನ ಪಾಲಿಗೆ ಬಂದಿರುವ ಕಷÀ್ಟದ ದಿನಗಳನ್ನು ಶಾಶ್ವತವೆಂದು ತಿಳಿದುಕೊಂಡು ಗೋಳಾಡುವುದರಲ್ಲಿ ಅರ್ಥವಿಲ್ಲ. ಅಂತೆಯೇ ಬಂದಿರುವ ಸುಖದ ದಿನಗಳಲ್ಲಿ ಅತಿಯಾದ ವಿಷಯ ಲಾಲಸೆಯಿಂದ ಮೈಮರೆತು ಮುಳುಗುವುದೂ ಬೇಡ.
ಇವೆರಡನ್ನು ಸಮನಾಗಿ ತೂಗಿಕೊಂಡು ಹೋಗಬಹುದಾದ ಒಂದು ಮಧ್ಯನಡೆಯನ್ನು ಅನುಸರಿಸಿದಾಗ ಮಾತ್ರ ಜೀವನದಲ್ಲಿ ಕಂಗೆಡುವ ಪರಿಸ್ಥಿತಿಯೇ ಬರುವುದಿಲ್ಲ. ಏಕೆಂದರೆ ಈ ಲೋಕದ ವ್ಯವಹಾರವೆಲ್ಲವೂ ಸಹ ಅವ್ಯಕ್ತವಾಗಿರುವ ಒಂದು ಶಕ್ತಿಯ ಕೈಯಲ್ಲಿದೆ. ಆ ಶಕ್ತಿಯು ನಮ್ಮನ್ನು ಒಮ್ಮೆ ಪಾತಾಳಕ್ಕಿಳಿಸಿಯೂ ನೋಡಬಲ್ಲದು, ಮಗದೊಮ್ಮೆ ಬಾನೆತ್ತರಕ್ಕೆ ಏರಿಸಿ ಆಟವಾಡಿಸಲೂಬಹುದು ; ಇಲ್ಲಿ ಪಾತಾಳವೂ ಶಾಶ್ವತವಲ್ಲ, ಬಾನೆತ್ತರವೂ ಶಾಶ್ವತವಲ್ಲ. ಪಾತಾಳದಲ್ಲಿ ದವನು ಒಮ್ಮೆಲೇ ಬಾನಿಗೂ ಹಾರಬಹುದು, ಬಾನಿನಲ್ಲಿರುವವನು ದೊಪ್ಪೆಂದು ಪಾತಾಳಕ್ಕೂ ಬೀಳಬಹುದು. ಆದ್ದರಿಂದ ಈ ಬದುಕು ಒಂದು ಹಾವು ಏಣಿಯ ಆಟವಿದ್ದಂತೆ. ಈ ಆಟದ ಮರ್ಮವನ್ನು ಅರಿತುಕೊಂಡು ಸಮಚಿತ್ತದಿಂದ ನಡೆದುಕೊಂಡು ಹೋಗುವುದೇ ಬಾಳಿನ ಧರ್ಮ. ಆದ್ದರಿಂದ ಮನುಜ ಜೀವಿಯು ಈ ಧರ್ಮವನ್ನು ಅನುಸರಿಸಿಕೊಂಡು ಹೋದಾಗ ಮಾತ್ರವೇ ಬಾಳು ಹಸನಾಗುವುದು.
ಬಾಳ ಸಿರಿ ಸೊಗಸುಗಳ ಪೆರಪನು ಖೇಲಕನು |
ಕೀಳದೆನಿಪವನೊರಟ, ಮಂಕ, ಕಲ್ಲೆದೆಗೆ ||
ತೋಳಿಂದೆ ತಿಳಿವಿಂದೆ ನುಡಿಯಿಂದೆ ಜಗದರಿವ |
ಮೇಲೆನಿಪವನೆ ರಸಿಕ-ಮಂಕುತಿಮ್ಮ ||
ಬಾಳಿನ ಸಿರಿಸಂಪತ್ತನ್ನೂ ಹೆಚ್ಚಿಸಿ ಅದನ್ನು ಸೊಗಸು ಎನಿಸುವವನು ನಿಜವಾದ ಆಟಗಾರ(ಖೇಲಕ), ಇದನ್ನು ಕೀಳು ಎಂದು ಎಣಿಸುವವನು ಮಂಕುದಿಣ್ಣೆ, ಒರಟ, ಅರಸಿಕ(ಕಲ್ಲೆದೆ) ಕಠಿಣ ಹೃದಯಿ, ಇನ್ನು ತನ್ನ ತೋಳಬಲದ ಜೊತೆಗೆ ಬುದ್ಧಿಶಕ್ತಿ ಉಪಯೋಗಿಸಿ ತನ್ನ ಮಾತುಗಳಿಂದ ಜಗತ್ತನ್ನು ಉತ್ತಮ ಎಂದು ಎಣಿಸುವವನು ರಸಿಕ.
ಬಾಳು ಚಕ್ರದಂತೆ ತಿರುಗುತ್ತಲೇ ಇರುತ್ತದೆ. ಅದರಲ್ಲಿ ಪ್ರತಿಯೊಂದು ಚಕ್ರೋಪಾದಿಯಲ್ಲಿ ತಿರುಗುವ ಈ ಚಕ್ರದಡಿಯಲ್ಲಿ ಸಾವಿರಾರು ಜನರ ಜೀವನವೇ ಅಡಗಿದೆ ಎಂದರೆ ತಪ್ಪಾಗಲಾರದು. ಈ ಬಾಳೆಂಬ ಆಟದ ಮರ್ಮವನ್ನು ಚೆನ್ನಾಗಿ ಅರಿತು ಇದರಲ್ಲಿ ಬರುವ ಅಡೆತಡೆಗಳನ್ನು ಸಲೀಸಾಗಿ ಮೆಟ್ಟಿ ಮುನ್ನಡೆಯುತ್ತಾ, ಬಾಳಿನಲ್ಲಿ ಬರುವಂತ ಎಲ್ಲಾ ಎಡರುತೊಡರುಗಳನ್ನು ತನ್ನ ಸ್ವತಃ ಬುದ್ಧಿಶಕ್ತಿಯಿಂದ ಎದುರಿಸಿ ನಿಂತು ಗೆಲ್ಲುವವನು ಜಾಣನೇ ಸರಿ.
ಈ ಬದುಕು ಎಲ್ಲರಿಗೂ ಒಂದೊಂದು ರೀತಿಯ ಸವಾಲನ್ನು ಕೊಡುತ್ತದೆ. ಆಸ್ತಿಯಾಗಿರಬಹುದು ಅಥವಾ ಹಣವೇ ಆಗಿರಬಹುದು, ತನಗೆ ಏನು ಬಂದಿದೆಯೋ ಅಷ್ಟೇ ಸಾಕು ಎಂದು ನಿರ್ಲಿಪ್ತರಾಗಿರುವುದು ಸಹ ಬುದ್ಧಿವಂತಿಕೆಯಲ್ಲ. ಬದಲಿಗೆ ತನ್ನ ಬಳಿ ಇದ್ದಂತಹದನ್ನು ಯಾವ ರೀತಿ ಉಪಯೋಗಿಸಿಕೊಂಡು ಋಜುಮಾರ್ಗದಿಂದ ಅದನ್ನು ಹೇಗೆ ದುಪ್ಪಟ್ಟು ಮಾಡಿಕೊಳ್ಳಬೇಕು ಎಂಬ ಆಲೋಚನೆ ಮಾಡಬೇಕು. “ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು” ಎಂಬಂತೆ ಇದ್ದದ್ದರ ಲ್ಲಿಯೇ ಕರಗಿಸಿಕೊಂಡು ಹೋಗುತ್ತಿದ್ದರೆ ಕೊನೆಗೊಂದು ದಿನ ಬರಿಗೈ ಆಗಬೇಕಾಗುತ್ತದೆ. ಆಗ ಯಾರೂ ಸಹ ಸಹಾಯಕ್ಕೆ ಬರುವುದಿಲ್ಲ. ಆದ್ದರಿಂದ ಹೊಸ ಹೊಸ ಮಾರ್ಗಗಳ ಅನುಸರಣೆಯಿಂದ ಔನ್ನತ್ಯ ವನ್ನು ಸಾಧಿಸುವವನು ಈ ಬಾಳೆಂಬ ಆಟದ ನಿಜವಾದ ಆಟಗಾರ.
ಸಂಪತ್ತಿನ ದ್ವಿಗುಣವು ಜೀವನದ ಸುಖ ವೈಭೋಗಗಳಿ ಗಾಯಿತು. ಬುದ್ದಿವಂತಿಕೆಯನ್ನು ಎಲ್ಲ ಹೇಗೆ ಉಪಯೋಗಿಸಿಕೊಂಡು ಕಾರ್ಯಸಾಧನೆ ಮಾಡಬೇಕೆಂಬ ಛಲ ನಮಗೆ ನೈತಿಕ ಬಲವನ್ನು ಕೊಡುತ್ತದೆ. ಈ ನೈತಿಕ ಬಲವೇ ನಮ್ಮ ಸಾಧನೆಯ ಮೊದಲ ಮೆಟ್ಟಿಲಾಗುತ್ತದೆ.
ಮನುಷ್ಯ ಸಣ್ಣ ಸಣ್ಣ ವಿಷಯಗಳನ್ನು ಸಹ ಬೆಟ್ಟದಷ್ಟು ಮಾಡಿಕೊಂಡು ತಾನು ಅದರ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಆಗ ಅವನದು ಒಂದೇ ಗೊಣಗಾಟ “ಜೀವನವೇ ಸರಿಯಿಲ್ಲ ಎಲ್ಲ ನಮ್ಮ ಹಣೆಬರಹ” ಎಂದು. ಇಂದಿನ, ಈಗಿನ ಸುಖ ಕಳೆದು ಕೊಳ್ಳುವವನು ಮೂರ್ಖ. ಅವನಲ್ಲಿ ಭಾವನೆಯೇ ಇಲ್ಲ, ಇಂತಹ ಭಾವನಾರಹಿತ ಜೀವನ ನಡೆಸುವವನು ಏನನ್ನು ಸಾಧಿಸಲಾರ. ಆದ್ದರಿಂದ ತನ್ನ ಸ್ವಂತ ಬಲದಿಂದ ಅದರ ಜೊತೆಗೆ ಬುದ್ಧಿಯನ್ನು ಉಪಯೋಗಿಸಿಕೊಂಡು ಸಮಯ, ಸಂದರ್ಭವನ್ನು ಹಾಗೂ ತನ್ನೆದುರು ಇರುವವರ ಮನಸ್ಸನ್ನು ಅರಿತುಕೊಂಡು ಮಾತನಾಡು ವವನು ನಿಜವಾದ ರಸಿಕ ಎನ್ನುತ್ತಾರೆ ಮಾನ್ಯ ಡಿ.ವಿಜಿಯವರು. ಮನುಷ್ಯನಿಗೆ ಅವರ ನಡೆ ನುಡಿ ಎರಡರಿಂದಲೇ ಗೌರವ ದೊರೆಯಲಿಕ್ಕೆ ಸಾಧ್ಯ. ನಾಲಿಗೆ ಶುದ್ಧ ಇದ್ದರೆ ಜಗತ್ತನ್ನು ಗೆಲ್ಲಬಹುದು, ಯಾರಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವು ಸಹ ಜೊತೆಗೂಡಿದರೆ ಪ್ರಪಂಚವೇ ನಮ್ಮದಾಗುತ್ತದೆ.
ಜೀವನವು ಸುಖ ದುಃಖಗಳ ಸಮ್ಮಿಲನ. ಆದ್ದರಿಂದ ಎರಡನ್ನೂ ಸಮಚಿತ್ತದಿಂದ ನೋಡುತ್ತಾ, ಬಂದಿದ್ದನ್ನು ಧೈರ್ಯವಾಗಿ ಎದುರಿಸುವ ಎದೆಗಾರಿಕೆಯನ್ನು ನಮ್ಮ ಜಾಣ್ಮೆಯ ಬಲದಿಂದ ಪಡೆದುಕೊಳ್ಳಬೇಕು. ಒದಗಿ ಬಂದಿರುವ ಇಂದಿನ ಖುಷಿಯನ್ನು ಸಂತೋಷವಾಗಿ ಅನುಭವಿಸಬೇಕು. ಕಬ್ಬನ್ನು ಹಿಂಡಿ ರಸತೆಗೆದಂತೆ ಬದುಕಿನಲ್ಲಿ ಬರುವ ಕಷ್ಟವನ್ನು ಅನುಭವಿಸಿದಾಗ ಸುಖವು ತಾನಾಗಿಯೇ ಅದರ ಹಿಂದೆ ಬರುತ್ತದೆ. ಆದ್ದರಿಂದ ಭರವಸೆಯನ್ನು ಇಟ್ಟುಕೊಳ್ಳುವ ಮೂಲಕ ನಾಳೆಯನ್ನು ಹಸನುಗೊಳಿಸಿಕೊಳ್ಳುವ ಕನಸು ನಮ್ಮಲ್ಲಿರಬೇಕು. ಆ ಕನಸಿಗೆ ಪುಷ್ಟಿಕೊಡುವಂತೆ ಎಲ್ಲದರಲ್ಲೂ ಒಳಿತನ್ನು ಕಂಡುಕೊಳ್ಳುತ್ತಾ ಜೀವನವನ್ನು ಸಾಗಿಸಿಕೊಂಡು ಹೋಗುವ ಜಾಣ್ಮೆ ಬೆಳೆಸಿಕೊಳ್ಳೋಣ.



