ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿರುವ 11 ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಕಡೂರು ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಬಿ.ಸಿ.ಕಲ್ಮರುಡಪ್ಪ (ಪ್ರಸ್ತುತ ಮೂಡಿಗೆರೆ ಗ್ರೇಡ್ -2 ತಹಶೀಲ್ದಾರ್), ವಿಷಯ ನಿರ್ವಾಹಕ ಗಿರೀಶ್ (ಬೀರೂರು ನಾಡ ಕಚೇರಿ), ರಾಜಸ್ವ ನಿರೀಕ್ಷಕ ರವಿಕುಮಾರ್ (ಕಡೂರು ಕಸಬಾ ಹೋಬಳಿ), ಗ್ರಾಮ ಆಡಳಿತಾಧಿಕಾರಿಗಳಾದ ಜಿ.ಎಂ.ಕುಮಾರ್ (ಬಿಳುವಾಲ ವೃತ್ತ), ಲಿಂಗರಾಜ್ ಕೆ,(ಮಲ್ಲೇಶ್ವರ ವೃತ್ತ), ರವಿ.ಕೆ.ಆರ್,(ತಂಗಲಿ ವೃತ್ತ), ಹನುಮಂತಪ್ಪ (ಆಲಘಟ್ಟ ವೃತ್ತ), ಕಾವ್ಯಾ ಟಿ.ಎಂ.(ಕಡೂರಹಳ್ಳಿ ವೃತ್ತ), ಎಸ್.ಎಂ.ಚನ್ನಬಸವಯ್ಯ (ಕಡೂರು ತಾಲ್ಲೂಕು) ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಡೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
60 ವರ್ಷ ವಯಸ್ಸು ಪೂರ್ಣಗೊಳಿಸಿದ ಹಾಗೂ ಬಿಪಿಎಲ್ ಕಾರ್ಡ್‌ದಾರರು ಈ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಆದರೆ ತಾಲ್ಲೂಕಿನಲ್ಲಿ ಸಾಮಾಜಿಕ ಭದ್ರತಾ ವಿಭಾಗದ ಶಿರಸ್ತೇದಾರ್ ಕಲ್ಮರುಡಪ್ಪ ಬಿ.ಸಿ ಅವರ ಲಾಗಿನ್ ದುರ್ಬಳಕೆಯಾಗಿ 35ರಿಂದ 45ರ ವಯೋಮಾನದವರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಲಾಗಿತ್ತು.
ಈ ಬಗ್ಗೆ ಅಂದಿನ ತರೀಕೆರೆ ಉಪವಿಭಾಗಾಧಿಕಾರಿ ಪ್ರಾಥಮಿಕ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ವರದಿ ಅನ್ವಯ ಕಲ್ಮರುಡಪ್ಪ ಅವರನ್ನು ಅಮಾನತುಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಪಿಂಚಣಿ ಮಂಜೂರು ಮಾಡಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾಡಿರುವ ಪ್ರಕರಣ ಎ ದೃಢವಾಗಿದೆ. ಇದಕ್ಕೆ ಕಾರಣಕರ್ತರಾದಕಂದಾಯ ಇಲಾಖೆಯ ರೆವಿನ್ಯೂ ಇನ್‌ಸ್ಪೆಕ್ಟರ್, ಗ್ರಾಮ ಆಡಳಿತಾಧಿಕಾರಿ ಸೇರಿ 11 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಂದಾಯ ಇಲಾಖೆ ಸೂಚನೆ ನೀಡಿತ್ತು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕಡೂರು ತಹಶೀಲ್ದಾರರಿಗೆ ಪತ್ರದ ಮೂಲಕ ನ.17ರಂದು ಪ್ರಕರಣ ದಾಖಲಿಸಲು ಸೂಚಿಸಿದ್ದರು.



