1003482971 (1)

 

 

ಕಾಫಿನಾಡಿನ ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢಶಾಲೆಗಳ ಮೆಟ್ಟಿಲು ಹತ್ತಿ ಒಂದೇ ಸೂರಿನಡಿ ಜೊತೆಜೊತೆಯಲಿ ಕಲಿತ ಸಹಪಾಠಿಗಳ ಸಮಾಗಮದ ಸಮ್ಮಿಲನದ ಕಥನವು ಸ್ವಾರಸ್ಯಕರವಾಗಿದ್ದು ನೆನಪಿನಂಗಳದಲ್ಲಿ  ಉಳಿಯುವಂತಾಗಿದೆ.
ಬಣಕಲ್ ಪ್ರೌಢಶಾಲೆಯ 1989ರ  ಹತ್ತನೇ ತರಗತಿಯ ಮೆಟ್ಟಿಲು ತುಳಿದ ವಿದ್ಯಾರ್ಥಿಗಳು ಭವಿಷ್ಯದ ಹಾದಿಯಲ್ಲಿ  ಉನ್ನತ ಶಿಕ್ಷಣದಲ್ಲಿ ಮುಂದೆ ಸಾಗಿ ಕೆಲವರು ಸಾಧಕರಾಗಿದ್ದರೆ,ಇನ್ನು ಕೆಲವು ಸಹಪಾಠಿಗಳು ವಿದೇಶಕ್ಕೆ ಹಾರಿ ಉನ್ನತ ಹುದ್ದೆ ಪಡೆದು ಕೆಲಸದಲ್ಲಿ ನಿರತರಾಗಿದ್ದಾರೆ.ಇನ್ನು ಕೆಲವರು ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ಅಂತಹ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೈಕಿ ಅಮೇರಿಕಾದ ವರ್ಜಿನೀಯದಲ್ಲಿ ಮೆಡಿಕಲ್ ಪ್ರೋಫೆಸರ್ ಆಗಿ ಬದುಕು ಕಟ್ಟಿಕೊಂಡಿರುವ ಸ್ಟ್ಯಾನಿ ಲೋಬೊ ತನ್ನ ಜೊತೆ ಓದಿದ ಸಹಪಾಠಿಗಳನ್ನು 35 ವರ್ಷದ ಬಳಿಕ ಹುಡುಕಲು ತನ್ನ ಮನೆ ಬಣಕಲ್ ನ ಚಕ್ಕಮಕ್ಕಿ ಮನೆಗೆ ಬಂದು, ಗೆಳೆಯರನ್ನು ಹುಡುಕಲು ಬುಲೆಟ್ ಬೈಕ್ ಹತ್ತಿ 1989-90 ಬ್ಯಾಚಿನ ಸಹಪಾಠಿಗಳ ಮಾಹಿತಿ ಕಲೆ ಹಾಕಿ ಹೊರಟ ಸಹಪಾಠಿ ಸ್ಟ್ಯಾನಿ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ  ಬೇಕರಿ ಇಟ್ಟು ವ್ಯಾಪಾರ ಮಾಡುತ್ತಿರುವ  ವಿಜಯ ಕುಮಾರ್ ಅವರನ್ನು ಪ್ರಥಮವಾಗಿ  ಬೇಟಿಯಾಗುತ್ತಾರೆ.
ಸಹಪಾಠಿಗಳು ಶಿಕ್ಷಣ ಮುಗಿಸಿ ಕುಟುಂಬದ ಜೊತೆ ಸಾಗಿ, ಮದುವೆಯಾಗಿರುವ ಹುಡುಗಿಯರು,ಹಾಗೂ ಹುಡುಗರು ದೂರದ ಊರುಗಳಲ್ಲಿ ಇರುವ  ಸಹಪಾಠಿಗಳನ್ನು ಸೇರುವ ಮನದ ತುಡಿತ ಒಂದೆಡೆಯಾದರೆ, ಒತ್ತಡದ ಜೀವನ ಶೈಲಿಯಲ್ಲಿ  ಗೆಳೆಯರ ಬೆಸುಗೆಗೆ ಹಾತೊರೆಯವ ಸಹಪಾಠಿ ಸ್ಟ್ಯಾನಿಗೆ ಅನಿಲ್ ಮೊಂತೆರೊ, ವಸಂತ ಪೂಜಾರಿ, ಸೈಯದ್ ನವೀದ್, ಮುನೀರ್, ರಿಯಾಜ್, ಉಮೇಶ್, ಸಲಾಂ, ಪ್ರಕಾಶ್, ರವಿ, ಗಣೇಶ್, ಆಲ್ವಿನ್, ಹರೀಶ್, ಮಾಜಿ ಯೋಧ ಟಿ.ಎಸ್ ಪ್ರಸನ್ನ, ಕಲ್ಲೇಶ್, ಸುಧಾಕರ್, ವಿನಯ ಪ್ರಭು, ಸುವರ್ಣಲತ, ಶರಾವತಿ,ಲತಾ ಕಳಸ,ಜಯಲಕ್ಷ್ಮಿ,ಶಾರದಾ,ಶಾಹಿಸ್ತ, ಸುಷ್ಮಾ,ಪ್ರಮೀಳ, ಬಿಂಬ..ಹೀಗೆ  ಒಬ್ಬೊಬ್ಬರೇ ಗೆಳೆಯರು ಅವರಿಗೆ ಸಿಗುತ್ತಾರೆ.
ಹೀಗೆ ಸೇರಿದ ಗೆಳೆಯರು ತನ್ನ ಜೊತೆ ಕಲಿತ ಇತರ ಸಹಪಾಠಿಗಳನ್ನು ಹುಡುಕಲು  ಸವಾಲಾಗುತ್ತದೆ.ಆದರೆ ಮೊಬೈಲ್ ಸಂಖ್ಯೆಯ ಸಂಪರ್ಕದಿಂದ ಮಾಹಿತಿ  ಕಲೆ ಹಾಕಿ ಕರೆ ಮಾಡಿ ಅವರ ಕುಶಲೋಪಹಾರಿ ವಿಚಾರಿಸಿ ಆನಂದ ಪಡುತ್ತಾರೆ. ಒಂದೆಡೆ ಸ್ನೇಹಿತರು ಸಿಕ್ಕ ಖುಷಿಯಾದರೆ ಮತ್ತೊಂದೆಡೆ ಅವರನ್ನು ಒಮ್ಮೆ ಕಾಣುವ ತವಕ,ಹೀಗೆ ಎಸ್ ಎಸ್ ಎಲ್ ಸಿ 1989-90ರ ಬ್ಯಾಚಿನ ಬಣಕಲ್ ಹೈಸ್ಕೂಲ್ ಗ್ರೂಪ್ ರಚಿಸಿ ಒಟ್ಟು ನಲವತ್ತು ಸದಸ್ಯರ ತಂಡದ ಗ್ರೂಪ್ ರೆಡಿಯಾಗುತ್ತದೆ.
ಕಳೆದ ವರ್ಷ 2024 ಡಿಸೆಂಬರ್ 6ರಂದು ಸಹಪಾಠಿಗಳ ಸಹಮಿಲನಕ್ಕಾಗಿ ದಿನವೂ ರೆಡಿಯಾಗುತ್ತದೆ. ಹೆಗ್ಗರವಳ್ಳಿಯ ಖಾಸಗಿ ಹೋಂ ಸ್ಟೇ ಒಂದರಲ್ಲಿ 35ವರ್ಷಗಳ ಬಳಿಕ ಗೆಳೆಯರು ಒಂದೆಡೆ ಸೇರಿ ಸಂತೋಷ ಕೂಟ ನಡೆಯುತ್ತದೆ. ಸಮಾಗಮದಲ್ಲಿ ಒಬ್ಬರನ್ನೊಬ್ಬರು ತಮ್ಮ ಜೀವನದ ನಡೆದು ಬಂದ ಹಾದಿಯ ತುಣುಕುಗಳನ್ನು ಮೆಲುಕು ಹಾಕುತ್ತಾರೆ.
ಓರ್ವ ಸ್ನೇಹಿತ ಚೇಗು ಗ್ರಾಮದ ಅಚ್ಯುತ ಪೂಜಾರಿ ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆಯ ಮೂಲೆ ಸೇರಿದ್ದಾರೆಂಬ ಮಾಹಿತಿ ಸಹಪಾಠಿಗಳಿಗೆ ಪರಸ್ಪರ ಚರ್ಚೆ ಮೂಲಕ ತಿಳಿದು ಬರುತ್ತದೆ.ಅವರು ಹಲವು ವರ್ಷಗಳ ಹಿಂದೆಯೇ ಕಾಲು ಸ್ವಾಧೀನ ಕಳೆದುಕೊಂಡು ನಡೆಯಲಾಗದೇ ಅಣ್ಣ ಅತ್ತಿಗೆ ಜೊತೆಗೆ ದಿನ ಸಾಗಿಸುತ್ತಿದ್ದಾರೆ.ಅವರ ಮನೆಯ ಹಾದಿ ಹಿಡಿದು ಸಾಗಿದ ಗೆಳೆಯರ ತಂಡ ಅಚ್ಯುತನನ್ನು ನೋಡಿ ಮನಸು ಮಮ್ಮಲ ಮರುಗುತ್ತದೆ.ಅವರ ಅಣ್ಣ ಅತ್ತಿಗೆಯವರ ಉತ್ತಮ ಆರೈಕೆಯಿದೆ ಇದೆಯಾದರೂ ಅಚ್ಯುತ ಪೂಜಾರಿ ಕಾಲಿನ ಸ್ವಾದೀನ ಇಲ್ಲದೇ ಕಪ್ಪೆಯಂತೆ ನಡೆದು ದಿನದೂಡುತ್ತಿದ್ದಾರೆ.ಅವರಿಗೆ ಸಹಪಾಠಿಗಳ ತಂಡದಿಂದ ಔಷಧಿಗಾಗಿ 1.25ಲಕ್ಷ ಹಣ ನೀಡಿ ಅವರಿಗೆ ಹಾರೈಸಿ ಗೆಳೆಯರ ತಂಡ ಬೀಳ್ಕೊಡುತ್ತದೆ.
ವ್ಯಾಟ್ಸಾಪ್ ಗ್ರೂಪಲ್ಲೆ ಸಮಯ ಸಿಕ್ಕಾಗಲೆಲ್ಲಾ ಹಲವು ವಿಚಾರಗಳು ವಿನಿಮಯ ಮಾಡುತ್ತಾ ಹರಟೆ ಹೋಡೆಯುತ್ತಾ ಈ ತಂಡ ಸಂಭ್ರಮಿಸುತ್ತದೆ. ಬಳಿಕ ಆ ಸಮಯದಲ್ಲಿ ಇದ್ದ ನಿವೃತ್ತಿಯಾಗದೇ ಉಳಿದಿದ್ದ ಒಬ್ಬರೇ  ಹೈಸ್ಕೂಲು ಮಾಸ್ಟರ್ ಪಿ.ವಾಸುದೇವ್ ಅವರಿಗೆ ಸಹಪಾಠಿಗಳು ಪ್ರೌಢಶಾಲೆಯಲ್ಲಿಯೇ ಸನ್ಮಾನಿಸಿದ ಕ್ಷಣವೂ ಶಾಲಾ ಮಾಸ್ಟರ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗೆ ಒಂದು ವರ್ಷ ಕಳೆದು ಡಿಸೆಂಬರ್ 6, 2025ರಂದು ಮತ್ತೇ ಈ ತಂಡ ಒಂದೆಡೆ ಸೇರಲು ಬಯಸಿ ಮೂಡಿಗೆರೆ ಕೊಲ್ಲಿಬೈಲಿನ ಖಾಸಗಿ ಹೋಂ ಸ್ಠೇ ಒಂದರಲ್ಲಿ ಗೆಟ್ ಟುಗೆದರ್ ನಡೆಸಿತು.ಸ್ನೇಹಿತರು ಈ ಬಾರಿ ನಡೆಯಲಾಗದ ಗೆಳೆಯ ಅಚ್ಯುತನನ್ನು ಕರೆದು ಕೊಂಡು ಹೋಗಿ ಅವರ ಜೊತೆ ಸಂತೋಷ ಕೂಟ ನಡೆಸಲು ತೀರ್ಮಾನಿಸಿದರು.
ಅಮೇರಿಕಾದಿಂದ ಬಂದ ಸಹಪಾಠಿ ಪ್ರೊಫೆಸರ್ ಸ್ಟ್ಯಾನಿ,ಮಾಜಿ ಯೋಧ ಪ್ರಸನ್ನ ಟಿ.ಎಸ್. ಸೇರಿ ಈ ಗೆಳೆಯನನ್ನು ಬೆನ್ನ ಮೇಲೆ ಉಪ್ಪಿನಮೂಟೆಯಂತೆ ಕೂರಿಸಿ ಸಂಭ್ರಮದ ಕೂಟಕ್ಕೆ ಕರೆ ತರುತ್ತಾರೆ.ಇದು ಗೆಟ್ ಟುಗೆದರ್ ನಲ್ಲಿ ಗೆಳೆಯರಿಗೆ ಎಲ್ಲಿಲ್ಲದ ಸಂತೋಷ,ಹಾಗೂ ಮನಸಿನಲ್ಲಿ ತುಮುಲತೆಯ ಭಾವನೆ ಮೂಡುತ್ತದೆ.ಅಸಹಾಯಕತೆಯಿಂದ ನಡೆಯಲಾಗದ ಮನೆ ಮೂಲೆ ಸೇರಿದ್ದ ಸಹಪಾಠಿ ಅಚ್ಯುತ ಪೂಜಾರಿಗೆ ಸಹಪಾಠಿಗಳು ನೀಡಿದ ಅತಿಥ್ಯದಿಂದ ಕಣ್ಣಾಲಿಗಳು ತೇವಗೊಂಡಿದ್ದವು.ಸಂಬಂಧವೇ ಇಲ್ಲದ ಸಹಪಾಠಿಗಳ ಸ್ನೇಹ  ಮರೆಯಲಾಗದ ಸಂಬಂಧದ ಗಂಟಾಗಿತ್ತು.
ಕುಟುಂಬದಲ್ಲಿ ಅಣ್ಣತಮ್ಮಂದಿರೇ ಒಬ್ಬರನ್ನೊಬ್ಬರು ಮುಖ ನೋಡದೇ ಮನಸ್ತಾಪ ಮಾಡಿಕೊಂಡು ಬದುಕುವ ಹಲವು ಕುಟುಂಬಗಳಿದ್ದರೂ ಈ ಗೆಳೆಯರು ಮಾತ್ರ ಗೆಳೆಯನನ್ನು ಬೆನ್ನೇರಿಸಿ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಿ ಒಂದಿಂಚು ಸಿಟ್ಟು  ಮಾಡದೇ ಕುಟುಂಬದಂತೆ ಸಂಭ್ರಮಿಸುತ್ತದೆ.ಅಚ್ಯುತ ಅವರಿಗೆ ಇದು ಅತೀವ ಸಂತಸದ ಕ್ಷಣವಾಗುತ್ತದೆ.
ಸಮಾಜದಲ್ಲಿ ಈಗ ಇಂತಹ ಹಲವು ತರಗತಿ ಸ್ನೇಹಿತರ ಗ್ರೂಪ್ ಗಳಿರಬಹುದು.ಉತ್ತಮ ಕೆಲಸಗಳು ಸಾಗುತ್ತಿರಬಹುದು.ಆದರೆ 1989-90ಬ್ಯಾಚಿನ ಎಸ್ ಎಸ್ ಎಲ್ ಸಿ ಬಣಕಲ್ ಹೈಸ್ಕೂಲ್  ಗ್ರೂಪ್ ಮಾತ್ರ ತಾವೆಲ್ಲಾ ಸೇರಿದ ದಿನಗಳನ್ನು ಸದಾ ಮೆಲುಕು ಹಾಕಿ ಪ್ರತಿ ವರ್ಷವೂ ಉಸಿರು ಇರೋವರೆಗೂ ಯಾರೇ ಬರಲಿ, ಬಾರದೇ ಇರಲಿ ಎಷ್ಟು ಜನ ಬರುತ್ತಾರೋ ಅಷ್ಟು ಜನ ಸೇರಿ ಗೆಳೆಯರ ಕಷ್ಟ ಸುಖ ಅರಿತು ಸಾಧ್ಯವಾದರೆ ನೆರವಾಗುವ,ಇಲ್ಲವಾದರೆ ಕೇಡು ಬಯಸದಿರೋಣ ಎಂಬ ಘೋಷಣೆಯನ್ನು ಸಹಪಾಠಿಗಳು ಈ ಬಾರಿ ಒಮ್ಮತದ ನಿರ್ಧಾರ ಮಾಡಿ ಗೆಟ್ ಟುಗೆದರ್ ಗೆ ತೆರೆ ಎಳೆದಿದ್ದಾರೆ. ಸಮಾಜದಲ್ಲಿ ಕಷ್ಟದಲ್ಲಿ ಇದ್ದ ಜನರಿಗೆ ಅದರಲ್ಲೂ ತಮ್ಮ ಸಹಪಾಠಿಗಳಿಗೆ, ಕಣ್ಣೊರೆಸುವ ಕೆಲಸಗಳಾಗಲಿ ಎಂಬುದೇ ಈ ಗೆಳೆಯರ ಸಂದೇಶ.
● ಅನಿಲ್ ಮೊಂತೆರೊ, ಕೊಟ್ಟಿಗೆಹಾರ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ