ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಬೈದುವಳ್ಳಿ ಗ್ರಾಮದಲ್ಲಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದು ಕಾಣಿಕೆ ಹಣವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಬೈದವಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿಯೇ ಇರುವ ಈಶ್ವರ ದೇವಸ್ಥಾನದಲ್ಲಿಟ್ಟಿದ್ದ ಕಾಣಿಕೆ ಡಬ್ಬವನ್ನು ಕಿಡಿಗೇಡಿಗಳು ಒಡೆದು ಅದರಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ. ದೇವಾಲಯದ ಮುಂದಿನ ಗೇಟ್ ಬೀಗ ಮುರಿದು ನಂತರ ಕಾಣಿಕೆ ಡಬ್ಬವನ್ನು ಒಡೆದು ಹಣವನ್ನು ಕಳ್ಳತನ ಮಾಡಲಾಗಿದೆ. ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಈಗ್ಗೆ ಕೆಲ ವರ್ಷಗಳ ಹಿಂದೆಯೂ ದೇವಸ್ಥಾನದಲ್ಲಿ ಇದೇ ರೀತಿ ಕಾಣಿಕೆ ಡಬ್ಬ ಕಳ್ಳತನವಾಗಿತ್ತು. ಇದೀಗ ಮತ್ತೊಮ್ಮೆ ಘಟನೆ ಮರುಕಳಿಸಿದೆ. ಈ ಬಗ್ಗೆ ಗೋಣಿಬೀಡು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿ ಕಳ್ಳರನ್ನು ಪತ್ತೆಹಚ್ಚುವ ಕಾರ್ಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



