ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ತಂಡ
ಮೂಡಿಗೆರೆ ತಾಲ್ಲೂಕು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣಗಳಲ್ಲಿ ಪೊಲೀಸ್ ತಂಡವು ಆರು ಜನ ಆರೋಪಿತರುಗಳನ್ನು ಬಂಧಿಸಿ ಕಳ್ಳತನ ಮಾಡಿದ ಸುಮಾರು 3 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ ಕಾಫಿ ಬೀಜವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಸುಮಾರು 10 ಲಕ್ಷ ರೂ ಬೆಲೆ ಬಾಳುವ 2 ಕಾರುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಗೋಣಿಬೀಡು ಸಮೀಪದ ಕಸ್ಕೇಬೈಲ್ ಗ್ರಾಮದಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ನಿವೃತ್ತ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ರಂಗಸ್ವಾಮಿ ಎಂಬುವವರ ಗೋಡಾನ್ ನಿಂದ ಕಾಫಿಯನ್ನು ಕಳ್ಳತನ ಮಾಡಲಾಗಿತ್ತು.
ದಿನಾಂಕ:09.05.2025 ರಂದು ಸಂಜೆ 06.00 ಗಂಟೆ ಸಮಯದಲ್ಲಿ ದೂರುದಾರರು ಅರೇಬಿಕ ಪಾರ್ಚ್ ಮೆಂಟ್ ಕಾಫಿಯನ್ನು ಗೋಡಾನ್ ನಲ್ಲಿ ಇಟ್ಟು ಮೂಡಿಗೆರೆಗೆ ಹೋಗಿದ್ದು ದಿನಾಂಕ: 10-05-2025 ರಂದು ಬೆಳಿಗ್ಗೆ 09.00 ಗಂಟೆಗೆ ವಾಪಾಸ್ ಬಂದಾಗ ಯಾರೋ ಕಳ್ಳರು ಗೋಡೋನ್ನ ಬೀಗವನ್ನು ಮುರಿದು ಸುಮಾರು 1 ಲಕ್ಷದ 40 ಸಾವಿರ ರೂಪಾಯಿ ಮೌಲ್ಯದ 10 ಅರೆಬಿಕಾ ಪಾರ್ಚ್ ಮೆಂಟ್ ಕಾಫಿ ಮೂಟೆಗಳನ್ನು ಕಳ್ಳತನ ಮಾಡಿದ ಬಗ್ಗೆ, ದೂರು ನೀಡಿದ್ದು ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳು ಪತ್ತೆ ಆಗಿರಲಿಲ್ಲ.
ಇದೇ ಎಸ್ಟೇಟ್ ನಿಂದ ದಿನಾಂಕ: 30-11-2025 ರಂದು ರಾತ್ರಿ ಸುಮಾರು 2.80.000/- ರೂ ಬೆಲೆ ಬಾಳುವ 18 ಮೂಟೆ ಆರೇಬಿಕಾ ಚೆರಿ ಕಾಫಿಯನ್ನು ಕಳ್ಳರು ಕಳ್ಳತನ ಮಾಡಿದ ಸಂಬಂದ ಗೋಣಿಬೀಡು ಪೊಲೀಸ್ ಠಾಣೆಯಲಿ.. ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನುಹತ್ತಿದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಮೊದಲ ಪ್ರಕರಣದಲ್ಲಿಯೂ ಇದೇ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ.
ನಾಗರಾಜು, ಶಿಶಿರ, ಕೌಸಿಕ್, ಭರತ್, ಗೌತಮ್, ಪ್ರಶಾಂತ್, ಮನು ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಸಕಲೇಶಪುರ ಮೂಲದವರು ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಇವರಲ್ಲಿ ಕೌಶಿಕ್ ಎಂಬಾತ ರಂಗಸ್ವಾಮಿ ಅವರ ಎಸ್ಟೇಟ್ ನಲ್ಲಿಯೇ ಕೆಲಸಕ್ಕೆ ಇದ್ದ, ಈತನೇ ಇತರೆ ಆರೋಪಿಗಳ ಜೊತೆ ಸೇರಿ ಕೃತ್ಯಕ್ಕೆ ಸಂಚು ರೂಪಿಸಿ ಕಾಫಿ ಕಳ್ಳತನ ಮಾಡಿದ್ದರು ಎಂದು ತಿಳಿದುಬಂದಿದೆ. ಕದ್ದ ಕಾಫಿಯನ್ನು ಸಕಲೇಶಪುರ ದಲ್ಲಿ ಮಾರಾಟ ಮಾಡಿದ್ದರು ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಡಿ.ವೈ.ಎಸ್.ಪಿ, ಚಿಕ್ಕಮಗಳೂರು ಉಪವಿಭಾಗ ನಾಗರಾಜ್ ಕೆ.ಆರ್. ರವರ ನೇತೃತ್ವದ ಪೊಲೀಸ್ ತಂಡವು 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ತಲಾ 50 ಕೆ.ಜಿಯ 10 ಚೀಲ ಅರೆಬಿಕಾ ಪಾರ್ಚ್ ಮೆಂಟ್ ಕಾಫಿಯನ್ನು ಹಾಗೂ ತಲಾ 50 ಕೆ.ಜಿಯ 5 ಚೀಲ ಅರೆಬಿಕಾ ಚಿರಿ ಕಾಫಿಯನ್ನು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ್ದ ಸುಮಾರು 10 ಲಕ್ಷ ರೂ ಮೌಲ್ಯದ 2 ಕಾರುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ರಾಜಶೇಖರ್ ಮತ್ತು ಗೋಣಿಬೀಡು ಪಿಎಸ್ಐ ಹರ್ಷಗೌಡ, ಕ್ರೈಮ್ ಬ್ರಾಂಚ್ ಪಿಎಸ್ಐ ಹೇಮಾ ಮತ್ತು ಸಿಬ್ಬಂದಿ ರಂಗೇಗೌಡ, ಸುನೀಲ್‍ನಾಯ್ಕ, ವಿ.ಎಸ್.ಸಚಿನ್, ಎಂ.ಸಿ.ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಫಿ ತೋಟದಲ್ಲಿ ಮತ್ತು ಕಣದಲ್ಲಿ ಹಾಗೂ ಗೋಡಾನ್ ನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಳೆಗಾರರು ಆದಷ್ಟು ಸಿಸಿ ಕ್ಯಾಮರ ಅಳವಡಿಕೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.



