ಚಿಕ್ಕಮಗಳೂರು ಜಿಲ್ಲೆಯಲ್ಲಿ ‘ಅಕ್ಕ ಪಡೆ’ ಯನ್ನು ಜಿತೇಂದ್ರ ಕುಮಾರ್ ದಾಯ್ಮಾ, ಐಪಿಎಸ್, ಪೊಲೀಸ್ ಅಧೀಕ್ಷಕರು ಮತ್ತು ಶ್ರೀಮತಿ. ಹೆಚ್. ಎಸ್. ಕೀರ್ತನಾ, ಐಎಎಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ರವರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಂಗಳವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಸಹಾನಭೂತಿ ಮತ್ತು ಸಮುದಾಯ ಸೇವೆಯಲ್ಲಿ ಚಾಲಿತವಾಗಿರುವ ಅಕ್ಕ ಪಡೆ ಸಮಾಜದಲ್ಲಿ ಸ್ಪಂದಿಸುವ ಸುರಕ್ಷತಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ.
ರಾಜ್ಯದಲ್ಲಿ ಮಹಿಳೆರ ಸುರಕ್ಷತೆಗಾಗಿ ಸರ್ಕಾರ ಮಹತ್ವದ ಕ್ರಮವೊಂದನ್ನು ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಗಾಗಿ ರಾಜ್ಯ ಸರ್ಕಾರವು “ಅಕ್ಕ ಪಡೆ” ಎಂಬ ಹೊಸ ಭದ್ರತಾ ಪಡೆಯನ್ನು ಪ್ರಾರಂಭಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಆರಂಭವಾಗಿರುವ ಈ ಉಪಕ್ರಮವು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣದ ಬೆಂಬಲ ನೀಡಲು ಉದ್ದೇಶಿಸಿದೆ. ಅಕ್ಕ ಪಡೆ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ.
ಏನಿದು ಅಕ್ಕ ಪಡೆ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ?
ಅಕ್ಕಪಡೆ ಎಂಬುದು ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸಾಚಾರವನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಹೊಸ ಮಹಿಳಾ ಸುರಕ್ಷತೆ ಮತ್ತು ರಕ್ಷಣಾ ಪಡೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಈ ಉಪಕ್ರಮವು ಪೊಲೀಸ್ ಸಿಬ್ಬಂದಿ ಮತ್ತು ತರಬೇತಿ ಪಡೆದ ಎನ್‌ಸಿಸಿ ಕೆಡೆಟ್‌ಗಳ ತಂಡಗಳನ್ನು ಒಳಗೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುತ್ತದೆ. ಬೀದರ್ ಜಿಲ್ಲೆಯಲ್ಲಿ ಯಶಸ್ವಿ ಪ್ರಾಯೋಗಿಕವಾಗಿ ಜಾರಿಯಾದ ಈ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಣೆ ಮಾಡಲಾಗುತ್ತಿದೆ.

ಸಹಾನುಭೂತಿ, ಸೇವಾಭಾವನೆ ಮತ್ತು ಸಮಾಜಮುಖಿ ಚಿಂತನೆ ಹೊಂದಿರುವ ಮಹಿಳೆಯರಿಗೆ ಒಂದು ವೇದಿಕೆ ಕಲ್ಪಿಸುವುದು. ಸಮಾಜದಲ್ಲಿ ಸುರಕ್ಷತೆ ಮತ್ತು ಶಿಕ್ಷಣದ ಕಿರು ಸೇತುವಾಗಿ, ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಡುವುದು ಯೋಜನೆ ಹಿಂದಿನ ಉದ್ದೇಶವಾಗಿದೆ.
ಈ ಪಡೆಗಳು ಬಸ್ ನಿಲ್ದಾಣಗಳು, ಶಾಲೆಗಳು, ಕಾಲೇಜುಗಳು, ಮಾರುಕಟ್ಟೆಗಳು, ಉದ್ಯಾನವನಗಳು ಮತ್ತು ದೇವಾಲಯಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿವೆ. ಕಾರ್ಯಾಚರಣೆಗಾಗಿ ಹೊಯ್ಸಳ ವಾಹನಗಳ ಮಾದರಿಯಲ್ಲಿ ಮಾರ್ಪಾಡು ಮಾಡಿದ ವಾಹನಗಳನ್ನು ಬಳಸಲಾಗುತ್ತದೆ. ಪ್ರತಿ ಘಟಕವು ಆರು ರಿಂದ ಹತ್ತು ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಕನಿಷ್ಠ ಇಬ್ಬರು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳು ಮತ್ತು ತರಬೇತಿ ಪಡೆದ ಎನ್‌ಸಿಸಿ ಕೆಡೆಟ್‌ಗಳು ಇರುತ್ತಾರೆ. ಅಕ್ಕ ಪಡೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸುತ್ತದೆ.
ಸಹಾಯವಾಣಿ: ಅಕ್ಕ ಪಡೆಯು ರಾಜ್ಯಾದ್ಯಂತ ಇರುವ ಸಹಾಯವಾಣಿಯ ಮೂಲಕ ತಲುಪಲು ಲಭ್ಯವಿರುತ್ತದೆ. ದೂರದ ಸ್ಥಳದಿಂದ ಕರೆ ಬಂದರೂ ತಕ್ಷಣದ ಸಹಾಯವನ್ನು ಒದಗಿಸಲಾಗುತ್ತದೆ.
- ತ್ವರಿತ ಕ್ರಮ: ತಂಡವು ದೂರುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲಿದ್ದು, ಗಂಭೀರ ಪ್ರಕರಣಗಳಲ್ಲಿ ಆರೋಪಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುತ್ತದೆ.
- ವಿಶೇಷ ತರಬೇತಿ: ಪಡೆಯ ಸದಸ್ಯರಿಗೆ ಹಿಂಸಾಚಾರ ಪ್ರಕರಣಗಳ ನಿರ್ವಹಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ವಿಶೇಷ ತರಬೇತಿ ನೀಡಲಾಗುತ್ತದೆ.
- ಜಾಗೃತಿ ಕಾರ್ಯಕ್ರಮಗಳು: ವಿದ್ಯಾರ್ಥಿಗಳು ಮತ್ತು ಮಹಿಳೆಯರಲ್ಲಿ ಬಾಲ್ಯ ವಿವಾಹ ನಿಷೇಧ, ಪೋಸ್ಕೋ ಕಾಯಿದೆ, ಮಹಿಳಾ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಲಾಗುವುದು. ಅಲ್ಲದೆ, 1098, 112, ಮತ್ತು 1930 ರಂತಹ ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.




