January 15, 2026

 

 

ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿರುವ ತೇಜಸ್ವಿ ಲೋಕ

 

ಲಾಲ್‍ಬಾಗ್‍ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ  ನಡೆಯುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಕುರಿತ ವಿಷಯವನ್ನು ಆಯ್ಕೆ ಮಾಡಲಾಗಿದ್ದು ತೇಜಸ್ವಿ ಜಗತ್ತು ಅನಾವರಣಗೊಳ್ಳಲಿದೆ.

ಬೆಂಗಳೂರಿನ ರಾಜ್ಯ ತೋಟಗಾರಿಕಾ ಇಲಾಖೆ, ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಹಯೋಗದಲ್ಲಿ ತೇಜಸ್ವಿ ಅವರ ಬದುಕಿನ ವಿವಿಧ ಘಟ್ಟಗಳ ಅಪರೂಪದ ಪೋಟೋ ಗ್ಯಾಲರಿ, ಕೀಟಗಳ ಪ್ರದರ್ಶನ ನಡೆಯಲಿದೆ. ಮತ್ತು ರಿಯಾಯಿತಿ ದರದಲ್ಲಿ ತೇಜಸ್ವಿ ಅವರ ಪುಸ್ತಕಗಳ ಮಾರಾಟ ನಡೆಯಲಿದೆ. ತೇಜಸ್ವಿ ಪ್ರತಿಷ್ಠಾನದ ಕಟ್ಟಡದ ಮಾದರಿಯನ್ನು ನಿರ್ಮಾಣ ಮಾಡಲಾಗಿದ್ದು ಒಳ ಹೊಕ್ಕು ವೀಕ್ಷಿಸುವ ಪ್ರೇಕ್ಷರಿಗೆ ತೇಜಸ್ವಿ ಅವರ ಚಿಂತನೆ, ಹವ್ಯಾಸ, ಬರಹಗಳ ಜಗತ್ತು ತೆರೆದುಕೊಳ್ಳಲಿದೆ.

ಲಾಲ್‍ಬಾಗ್‍ನ ಗಾಜಿನ ಮನೆಯ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಹಾರುವ ಓತಿ, ಆನೆ ಪ್ರತಿಕೃತಿ ನಿರ್ಮಾಣವಾಗಲಿದ್ದು, ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಹೋ ಜೋಡಣೆ ಇರಲಿದೆ. ಬೆಟ್ಟ, ಜಲಪಾತ, ತೇಜಸ್ವಿ ಅವರ ಮನೆ ನಿರುತ್ತರ, ತೇಜಸ್ವಿ ರಾಜೇಶ್ವರಿ ಅವರ ಪ್ರತಿಮೆಗಳು, ನಾಯಿ ಕಿವಿ, ಜೇನುಹುಳು, ಜೀರುಂಡೆ ಮೊದಲಾದ ಪ್ರಾಣಿ ಪಕ್ಷಿ ಕೀಟಗಳ ಪುಷ್ಪ ಮಾದರಿಗಳು, ತೇಜಸ್ವಿ ಪ್ರತಿಷ್ಠಾನದ ಕಟ್ಟಡದ ಮಾದರಿ ಕಾಣಸಿಗಲಿದೆ. ಇದರ ಜೊತೆಗೆ ಕುವೆಂಪು, ಶಿವರಾಮ ಕಾರಂತ, ಲೋಹಿಯಾ, ತೇಜಸ್ವಿ ಅವರ ಪುಸ್ತಕಗಳ ಮಾದರಿಗಳು, ತೇಜಸ್ವಿ ದಂಪತಿಗಳ ಮಂತ್ರ ಮಾಂಗಲ್ಯದ ಸನ್ನಿವೇಶವನ್ನು ಪುಷ್ಪದಲ್ಲಿ ಮರುರೂಪಿಸಲಾಗಿದೆ.

ವಿವಿಧ ಕಾರ್ಯಕ್ರಮಗಳು,  ನಾಟಕ ಪ್ರದರ್ಶನ, ಸಂವಾದವು ನಡೆಯಲಿದ್ದು ಜನವರಿ 15 ರಿಂದ 26ರವರೆಗೆ ಪ್ರತಿದಿನ ಸಂಜೆ 5 ರಿಂದ 7 ರವರೆಗೆ ವಿವಿಧ ವೇದಿಕೆ ಕಾರ್ಯಕ್ರಮಗಳು ನಡೆಯಲಿದೆ. ಜ.15 ರಂದು ತೇಜಸ್ವಿ ಕುಟುಂಬದ ಸದಸ್ಯರೊಂದಿಗೆ ಸಂವಾದ, ಜ.16 ರಂದು ನನ್ನ ತೇಜಸ್ವಿ ನಾಟಕ, ಜ.17 ರಂದು ತೇಜಸ್ವಿ ಒಡನಾಡಿಗಳೊಂದಿಗೆ ಮಾತುಕತೆ, ಜ.18 ರಂದು ಕರ್ವಾಲೊ ನಾಟಕ, ಜ.19 ಸಿನಿಮಾ ರಂಗಭೂಮಿ ಪ್ರತಿಭೆಗಳೊಂದಿಗೆ ಸಂವಾದ, ಜ.20 ಕೃಷ್ಣೆಗೌಡರ ಆನೆ ನಾಟಕ, ಜ.21 ತೇಜಸ್ವಿ ಸಾಕ್ಷ್ಯಚಿತ್ರ ಪ್ರದರ್ಶನ, ಜ.22 ಜುಗಾರಿ ಕ್ರಾಸ್ ನಾಟಕ, ಜ.23 ತೇಜಸ್ವಿ ವಿಶ್ವರೂಪ ದರ್ಶನ-ಸಂವಾದ, ಜ.24 ಯಮಳ ಪ್ರಶ್ನೆ ನಾಟಕ, ಜ.25 ತೇಜಸ್ವಿ ಆಪ್ತರೊಂದಿಗೆ ಸಂವಾದ, ಜ.26 ಅಣ್ಣನ ನೆನಪು ನಾಟಕ ಪ್ರದರ್ಶನ ನಡೆಯಲಿದೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಜನವರಿ 14 ರಂದು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಲಾಲ್ ಬಾಗ್ ವರೆಗೆ ಬೈಕ್ ಜಾಥಾ ನಡೆಯಲಿದೆ. ಜಾಥಾ ಸಾಗುವ ಮಾರ್ಗ ಮಧ್ಯೆ ತೇಜಸ್ವಿ ಅವರ ಮನೆ ನಿರುತ್ತರ ಸೇರಿದಂತೇ ತೇಜಸ್ವಿ ಓದು ಕಾರ್ಯಕ್ರಮ ನಡೆಯಲಿದೆ.

‘ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ತೇಜಸ್ವಿ ವಿಸ್ಮಯ ಲೋಕವನ್ನು ಕಣ್ತುಂಬಿಕೊಳ್ಳಲು ತೇಜಸ್ವಿ ಅಭಿಮಾನಿಗಳು, ಯುವ ಮನಸ್ಸುಗಳು ಉತ್ಸುಕರಾಗಿದ್ದಾರೆ. ಪಶ್ಚಿಮ ಘಟ್ಟ, ಕೀಟ ಪ್ರಪಂಚ, ತೇಜಸ್ವಿ ಅವರ ಸಾಹಿತ್ಯ ಲೋಕ ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆ. ತೇಜಸ್ವಿ ಅವರ ಚಿಂತನೆ ಮತ್ತು ಆಶಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ತೇಜಸ್ವಿ ಪ್ರತಿಷ್ಠಾನವೂ ಈ ಫಲಪುಷ್ಪ ಪ್ರದರ್ಶನದಲ್ಲಿ ಜ್ಞಾನಪ್ರಸರಣಕ್ಕೆ ಸಹಕಾರವನ್ನು ನೀಡಿದ್ದು ಫಲಪುಷ್ಪ ಪ್ರದರ್ಶನದಲ್ಲಿ ತೇಜಸ್ವಿ ಅವರ ಕುರಿತಾದ ನಾಟಕ, ಸಂವಾದ, ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.’

            -ಡಾ.ಪ್ರದೀಪ್ ಕೆಂಜಿಗೆ, ಅಧ್ಯಕ್ಷರು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಕೊಟ್ಟಿಗೆಹಾರ

 

‘ಲಾಲ್‍ಬಾಗ್‍ನಲ್ಲಿ ನಡೆಯುವ ಈ ಬಾರಿಯ ಫಲಪುಷ್ಪ ಪ್ರದರ್ಶನ ತೇಜಸ್ವಿ ಅಭಿಮಾನಿಗಳಿಗೆ ಓದುಗರಿಗೆ ವಿಶೇಷವಾಗಿದೆ. ಬೆಂಗಳೂರಿನ ರಾಜ್ಯ ತೋಟಗಾರಿಕಾ ಇಲಾಖೆ, ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಹಯೋಗದೊಂದಿಗೆ ತೇಜಸ್ವಿ ಅವರ ವೈವಿಧ್ಯಮಯ ಜಗತ್ತು ಅನಾವರಣಗೊಳ್ಳಲಿದೆ. ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಪುಸ್ತಕ, ಕೀಟಗಳ ಪ್ರದರ್ಶನ ಮತ್ತು ತೇಜಸ್ವಿ ಅವರ ಪೋಟೋ ಗ್ಯಾಲರಿಯನ್ನು ಮಾಡಲಾಗಿದ್ದು ತೇಜಸ್ವಿ ಪ್ರತಿಷ್ಠಾನದ ಕಟ್ಟಡದ ಮುಂಭಾಗದ ಮಾದರಿಯ ಮೂಲಕ ಒಳ ಹೊಕ್ಕು ತೇಜಸ್ವಿ ಅಭಿರುಚಿಯ ಕ್ಷೇತ್ರಗಳಾದ ಕೀಟ, ಚಿತ್ರಗಳ ವೀಕ್ಷಣೆ ಮಾಡಬಹುದಾಗಿದೆ.’

                                            -ಡಾ.ಸಿ.ರಮೇಶ್, ಸದಸ್ಯ ಕಾರ್ಯದರ್ಶಿಗಳು,

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ