ಕಾಫಿನಾಡು ಚಿಕ್ಕಮಗಳೂರು ಹಾಸನದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಬಿದ್ದ ವರ್ಷದ ಮೊದಲ ರೈತರ ಕಣ್ಣಲ್ಲಿ ನೀರು ತರಿಸಿದೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಬೀಜ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದೊಂದು ವಾರದಿಂದ ಮೋಡ ಕವಿದ ವಾತಾವರಣವಿತ್ತು, ಹೀಗೆಯೇ ಮೋಡದಲ್ಲಿಯೇ ಮುಗಿದು ಹೋಗುತ್ತದೆ ಎಂದು ಬೆಳೆಗಾರರು ದೈರ್ಯವಾಗಿದ್ದರು. ಆದರೆ ಮಂಗಳವಾರ ಮಧ್ಯಾಹ್ನದ ನಂತರ ಏಕಾಏಕಿ ಧಾರಾಕಾರ ಮಳೆ ಬಂದಿದೆ. ಇದರಿಂದ ಮನೆಂಗಳದಲ್ಲಿದ್ದ ಕಾಫಿ ಬೀಜಗಳು ನೀರಲ್ಲಿ ತೇಲಿ ಹೋಗಿವೆ. ಈ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ, ಶೃಂಗೇರಿ, ಮೂಡಿಗೆರೆ, ಬಾಳೆಹೊನ್ನೂರು ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಒಂದು ಗಂಟೆಗಳ ಕಾಲ ಭಾರೀ ಗಾಳಿಯೊಂದಿಗೆ ಮಳೆಯಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಈಗ ಕಾಫಿ ಅಡಿಕೆ ಭತ್ತದ ಕೊಯ್ಲಿನ ಸಮಯವಾಗಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ರೈತರಿಗೆ ತೀವ್ರ ನಷ್ಟವುಂಟಾಗಿದೆ. ಪ್ರಮುಖವಾಗಿ ಕಾಫಿ ಕೊಯ್ಲು ಮಾಡಿ ಕಣದಲ್ಲಿ ಹಾಕಿದ್ದ ಕಾಫಿ ಜೋರಾಗಿ ಸುರಿದ ಮಳೆಯಿಂದ ತೊಯ್ದು ಹೋಗಿದ್ದು, ಮತ್ತೆ ಕೆಲವು ಕಡೆ ಮಳೆನೀರಿನಲ್ಲಿ ಕಾಫಿ ಬೀಜಗಳು ಕೊಚ್ಚಿಹೋಗಿವೆ. ಇದರಿಂದ ಕಾಫಿ ಬೀಜದ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಗಿಡದಲ್ಲಿ ಹಣ್ಣಾಗಿ ನಿಂತಿರುವ ಕಾಫಿ ಹಣ್ಣುಗಳು ನೆಲಕ್ಕುದುರುವ ಆತಂಕ ಎದುರಾಗಿದೆ. ಮತ್ತೊಂದೆಡೆ ಮಳೆಯಿಂದ ಕಾಫಿ ಅಕಾಲಿಕವಾಗಿ ಹೂವು ಮತ್ತು ಮೊಗ್ಗು ಆಗುವುದರಿಂದ ಮುಂದಿನ ವರ್ಷದ ಬೆಳೆಯ ಮೇಲೂ ಪರಿಣಾಮ ಬೀರಲಿದೆ.
ಒಟ್ಟಾರೆ ಬೆಳೆಗಾರರಲ್ಲಿ ಹರ್ಷ ತರಬೇಕಾಗಿದ್ದ ವರ್ಷದ ಮೊದಲ ಮಳೆ ರೈತರಿಗೆ ಕಣ್ಣೀರ ಮಳೆಯಾಗಿ ಮಾರಕವಾಗಿ ಪರಿಣಮಿಸಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ ?
ಸಕಲೇಶಪುರ, ವನಗೂರು ಕೂಡು ರಸ್ತೆ 15 ಸೆಂಟ್ಸ್
ದೇವಾಲಕೆರೆ : 2.45 ಇಂಚು
ದಾರದಹಳ್ಳಿ ಮೂಡಿಗೆರೆ : 1.40 ಇಂಚು
ಬಾಳೆಹೊಳೆ ಕಳಸ ತಾ. : 75 ಸೆಂಟ್ಸ್
ಜನ್ನಾಪುರ ಮೂಡಿಗೆರೆ ತಾ : 60 ಸೆಂಟ್ಸ್
ಗೋಣಿಬೀಡು ಮೂಡಿಗೆರೆ ತಾ : 40 ಸೆಂಟ್ಸ್
ಕೊಟ್ಟಿಗೆಹಾರ : 75 ಸೆಂಟ್ಸ್
ದೇವರಮನೆ : 20 ಸೆಂಟ್ಸ್
ಬಸರಿಕಟ್ಟೆ 1.20 ಇಂಚು
ಗುತ್ತಿ 50 ಸೆಂಟ್ಸ್
ಉತ್ತಿನಕೊಳಲು ಹಿರೇಬೈಲ್ 2.20 ಇಂಚು
ಬಾಳೆಹೊನ್ನೂರು : 2.10 ಇಂಚು
ಬೆಟ್ಟಗೆರೆ 2.30 ಇಂಚು
ಸಾರಗೋಡು : 50 ಸೆಂಟ್ಸ್
ಮೇಲಜಾಣಿಗೆ ಮೂಡಿಗೆರೆ ತಾ : 2.30 ಇಂಚು
ಮಾಲೀಗನಾಡು ಬಾಳೂರು ಹೋಬಳಿ : 2.80 ಇಂಚು
ಗೌಡಹಳ‍್ಳಿ ಮೂಡಿಗೆರೆ ತಾ : 65 ಸೆಂಟ್ಸ್
ದೇವರುಂದ ಮೂಡಿಗೆರೆ ತಾ : 2.80 ಇಂಚು
ಬಣಕಲ್ ಹೊರಟ್ಟಿ : 2 ಇಂಚು
ಅರಳಿಕೊಪ್ಪ ಕೊಪ್ಪ ತಾ : 1.85 ಇಂಚು



