ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಮಂಗಳವಾರ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಪಕ್ಷ, ಸಂಘಟನೆ ಮುಖಂಡರು ಹಾಗೂ ಅಧಿಕಾರಿಗಳ ಪೂರ್ವಭಾವಿಸಭೆ ನಡೆಯಿತು.
ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ಧ್ವಜಾರೋಹಣ, ಪಥಸಂಚಲನ, ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆ, ವಿದ್ಯಾರ್ಥಿಗಳ ಭಾಗವಹಿಸುವಿಕೆ, ಸಾರ್ವಜನಿಕರ ಸಹಕಾರ, ಭದ್ರತಾ ಕ್ರಮಗಳ ಬಗ್ಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಪಟ್ಟಿ ತಯಾರು ಬಗ್ಗೆ ಚರ್ಚೆ ನಡೆಯಿತು. ಸಾಧಕರಿಗೆ ಸನ್ಮಾನ ವಿಚಾರ ಬಂದಾಗ, ವಿವಿಧ ಸಂಘ ಸಂಸ್ಥೆ ಮುಖಂಡರು, ಈ ಹಿಂದೆ ಬೇಕಾಬಿಟ್ಟಿಯಾಗಿ ಸನ್ಮಾನಿತರ ಪಟ್ಟಿ ತಯಾರಿಸಿ ಕಾರ್ಯಕ್ರಮದಲ್ಲಿ ಗೌರವಿಸಲಾಗಿದೆ. ಇದು ಮತ್ತೆ ಮರುಕಳಿಸಬಾರದು. ಸನ್ಮಾನಿತರು ಸಾಧನೆ ಜತೆಗೆ ಉತ್ತಮ ವ್ಯಕ್ತಿಯಾಗಿರಬೇಕೆಂದು ಸಭೆ ಗಮನ ಸೆಳೆದರು.
ಬಳಿಕ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಎಲ್ಲಾ ಸಂಘ ಸಂಸ್ಥೆ ಮುಖಂಡರನ್ನು ಕರೆದು ಶನಿವಾರ ಮತ್ತೊಂದು ಸಭೆ ನಡೆಸಿ ಉತ್ತಮ ಸಾಧಕರನ್ನು ಆಯ್ಕೆ ಮಾಡಬೇಕು. ಎಲ್ಲಾ ಇಲಾಖೆಯಲ್ಲಿ ಹಿಂದಿನ ದಿನವೇ ದೀಪಾಲಂಕಾರ ಮಾಡಬೇಕು. ಸಣ್ಣಪುಟ್ಟ ಗೊಂದಲ ನಿವಾರಿಸಿಕೊಂಡು ಸಂವಿಧಾನಾತ್ಮಕ ಮೌಲ್ಯ ಪ್ರತಿಬಿಂಭಿಸುವ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಬೇಕು. ಜತೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿರಬೇಕೆಂದು ಹೇಳಿದರು.

ತಹಸೀಲ್ದಾರ್ ಎಸ್.ಅಶ್ವಿನಿ, ತಾ.ಪಂ. ಇಒ ದಯಾವತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕೆಡಿಪಿ ಸದಸ್ಯರುಗಳು, ವಿವಿಧ ರಾಜಕೀಯ ಪಕ್ಷ ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.



