ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ವಯಕ್ತಿಕ ವಿಚಾರದ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟರ್ ಹಾಕಿರುವ ರಾಮನಗರದ ಯಕ್ಷಿತ್‍ರಾಜ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೂಡಿಗೆರೆ ಕಾಂಗ್ರೆಸ್ ಎಸ್ಸೀ ಘಟಕದ ಅಧ್ಯಕ್ಷ ಸುಧೀರ್ ಚಕ್ರಮಣಿ ಒತ್ತಾಯಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಹುದ್ದೆ ಹಾಗೂ ರಾಜಕೀಯ ಕ್ಷೇತ್ರವಾಗಿದ್ದರೂ ಎಲ್ಲರಿಗೂ ವಯಕ್ತಿಕ ಜೀವನವಿರುತ್ತದೆ. ಅದೇ ರೀತಿಯಲ್ಲಿ ಶಾಸಕಿ ನಯನಾ ಮೋಟಮ್ಮ ಅವರು ರಾಜಕೀಯ ಜೀವನ ಹಾಗೂ ವಯಕ್ತಿಕ ಜೀವನದಲ್ಲಿ ಎಲ್ಲರಂತೆ ಇದ್ದಾರೆ. ಹಾಗಾಗಿ ಅವರು ರಾಜಕೀಯ ಹಾಗೂ ವಯಕ್ತಿಕ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು 2 ಇನ್ಸ್‍ಟಾಗ್ರಾಮ್ ಪೇಜ್ ಮಾಡಿಕೊಂಡಿದ್ದು, ರಾಜಕೀಯ ಕ್ಷೇತ್ರ ಹಾಗೂ ವಯಕ್ತಿಕ ವಿಚಾರದ ಬಗ್ಗೆ ಪ್ರತ್ಯೇಕವಾಗಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಕೆಲ ಅವಿವೇಕಿಗಳು ಸಾಮಾಜಿಕ ಜಾಲಾತಣದಲ್ಲಿ ಶಾಸಕರ ವಿರುದ್ಧ ಅವ್ಯಾಚ್ಯ ಶಬ್ದ ಬಳಕೆ ಮಾಡಿರುವುದನ್ನು ಖಂಡನೀಯ ಎಂದು ಹೇಳಿದರು.
ಎಸ್ಟೀ ಘಟಕದ ಅಧ್ಯಕ್ಷ ಹರೀಶ್ ಸಬ್ಬೇನಹಳ್ಳಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮದುವೆ, ಹುಟ್ಟು ಹಬ್ಬ ಸೇರಿದಂತೆ ವಿವಿಧ ಸಮಾರಂಭದಲ್ಲಿ ಹಾಗೂ ಪ್ರವಾಸಿ ತಾಣಗಳಲ್ಲಿ ಸಾಮಾನ್ಯವಾಗಿ ಇರುವಂತೆ ನಮ್ಮ ಶಾಸಕರು ಕೂಡ ಇದ್ದಾರೆ. ಶಾಸಕರು ಕ್ಷೇತ್ರದಲ್ಲಿ ಪಾರದರ್ಶಕವಾಗಿ ಕೆಲಸ ಮಾಡದಿದ್ದರೆ ಅದನ್ನು ಕ್ಷೇತ್ರದ ಜನತೆ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಅವರ ವಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ಇನ್ನು ಮುಂದೆ ಸುಖಾ ಸುಮ್ಮನೆ ಶಾಸಕರ ವಯಕ್ತಿಕ ವಿಚಾರದ ಬಗ್ಗೆ ಯಾರೇ ಅವ್ಯಾಚ್ಯ ಶಬ್ಧ ಬಳಸಿದರೆ ಅವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.



