ಮೂಡಿಗೆರೆ ಪಟ್ಟಣದ ಛತ್ರಮೈಧಾನದ ಸಮೀಪ 1976 ರ ದಶಕದಲ್ಲಿ ಪ್ರಾರಂಭವಾದ ಸಂದೇಶ್ ಚಿತ್ರಮಂದಿರ ತಾಲ್ಲೂಕಿನ ಜನರಿಗೆ ಮನೋರಂಜನೆ ನೀಡುವುದರ ಮೂಲಕ ಪ್ರಸಿದ್ದಿಯಾಗಿತ್ತು. ಒಂದು ಕಾಲದಲ್ಲಿ ಇದು ಮೂಡಿಗೆರೆ ಮತ್ತು ಸುತ್ತಲ ತಾಲ್ಲೂಕುಗಳ ಜನರಿಗೆ ನೆಚ್ಚಿನ ತಾಣವಾಗಿತ್ತು.
ಆದರೆ ಬದಲಾದ ಕಾಲಮಾನದಲ್ಲಿ ಚಿತ್ರಮಂದಿರಗಳಿಗೆ ಹೋಗುವ ಜನರ ಸಂಖ್ಯೆ ಕಡಿಮೆಯಾದುದರಿಂದ ಕಳೆದ ಕೆಲವು ವರ್ಷಗಳ ಹಿಂದೆ ಅನಿವಾರ್ಯವಾಗಿ ಚಿತ್ರಮಂದಿರವನ್ನು ಮುಚ್ಚಲಾಯಿತು. ಒಂದು ಕಾಲದಲ್ಲಿ ವೈಭವದ ತಾಣವಾಗಿದ್ದ ಸಂದೇಶ್ ಚಿತ್ರಮಂದಿರ ಇದೀಗ ಚಿತ್ರಪ್ರದರ್ಶನ ನಿಂತ ಮೇಲೆ ಸಂಪೂರ್ಣ ಪಾಳುಬಿದ್ದಿದೆ. ಚಿತ್ರಮಂದಿರದ ಸುತ್ತ ಗಿಡಗಂಟಿಗಳು ಬೆಳೆದು ಪೊದೆಗಳ ಗೂಡಾಗಿದೆ. ಹಾವು ಚೇಳುಗಳು ಎಲ್ಲೆಂದರಲ್ಲೆ ಓಡಾಡಲು ಪ್ರಾರಂಬಿಸಿವೆ. ಜೊತೆಗೆ ಕೆಲವು ಪುಂಡ ಪೋಕರಿಗಳಿಗೆ ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಸಂದೇಶ್ ಚಿತ್ರಮಂದಿರದ ಸುತ್ತ ಮುತ್ತಲ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಗಳಲ್ಲಿ ಜನರು ವಾಸಿಸುತ್ತಿದ್ದು ಸಂಜೆಯಾಗುತ್ತಿದ್ದಂತೆ ಪುಂಡ ಪೋಕರಿಗಳು ಮದ್ಯಪಾನ,ದೂಮಪಾನ ಮಾಡುತ್ತಾ ಸದಾ ನಶೆಯಲ್ಲಿ ಇರುತ್ತಿದ್ದು ಕತ್ತಲಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಚಿತ್ರಮಂದಿರದ ಸುತ್ತ ಮುತ್ತ ಸ್ವಚ್ಛಗೊಳಿಸುವುದರೊಂದಿಗೆ ಚಿತ್ರಮಂದಿರದ ಕಟ್ಟಡಕ್ಕೆ ಸೂಕ್ತ ಬಂಧೋಬಸ್ತ್ ಮಾಡಿ ಅನೈತಿಕ ಕಾರ್ಯಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಮನವಿಮಾಡಿಗೊಂಡಿದ್ದಾರೆ.
ಚಿತ್ರಮಂದಿರಕ್ಕೆ ಸಂಬಂಧ ಪಟ್ಟವರು ಇತ್ತ ಮುಖ ಹಾಕದೆ ಇರುವುದು ಅನೈತಿಕ ಕಾರ್ಯಗಳು ರಾಜರೋಷವಾಗಿ ನಡೆಯಲು ಕಾರಣವಾಗಿದೆ. ಚಿತ್ರಮಂದಿರದ ಜಾಗ ಖಾಸಗಿಯಾಗಿದ್ದು ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸ್ವಚ್ಛತೆ ಕಾರ್ಯ ಮಾಡಲು ಹಿಂದೇಟು ಹಾಕುತ್ತಿದ್ದು. ಅಧಿಕಾರಿಗಳು ತಕ್ಷಣವೇ ಚಿತ್ರಮಂದಿರದ ಮಾಲೀಕರಿಗೆ ನೋಟೀಸು ನೀಡುವುದರೊಂದಿಗೆ ಸ್ವಚ್ಛತೆಯ ಜೊತೆಗೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.




