ಕಾಫಿನಾಡಿನಲ್ಲಿ ದಿನದಿಂದ ದಿನಕ್ಕೆ ಕಾಡುಕೋಣಗಳ ಹಾವಳಿ ಮಿತಿಮೀರುತ್ತಿದ್ದು, ಕಾಫಿ ಬೆಳೆಗಾರರು ಹಾಗೂ ಸಾರ್ವಜನಿಕರು ಅಕ್ಷರಶಃ ಹೈರಾಣಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಬೆಟ್ಟದಮಳಲಿ ಸುತ್ತಮುತ್ತಲ ಗ್ರಾಮದ ಕಾಫಿ ತೋಟಗಳಲ್ಲಿ ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದೆ. ಕಾಡುಕೋಣಗಳು ಏಕಾಏಕಿ ತೋಟಕ್ಕೆ ಲಗ್ಗೆ ಇಟ್ಟಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಪಡುವಂತಾಗಿದ್ದು, ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ.
ಕಾಫಿ ಕೊಯ್ಲಿನ ಈ ಪ್ರಮುಖ ಸಮಯದಲ್ಲಿ ಕಾಡುಕೋಣಗಳು ತೋಟದಲ್ಲೇ ಮೊಕ್ಕಾಂ ಹೂಡಿರುವುದರಿಂದ ಬೆಳೆ ಹಾನಿಯಾಗುವ ಭೀತಿಯೂ ಎದುರಾಗಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಕಾಡುಕೋಣಗಳ ದಾಳಿಯಿಂದ ಪ್ರಾಣಹಾನಿ ಸಂಭವಿಸಿರುವ ಬೆನ್ನಲ್ಲೇ, ಬೆಟ್ಟದಮಳಲಿ ಗ್ರಾಮದಲ್ಲಿ ಹಿಂಡು ಹಿಂಡಾಗಿ ಕಾಡುಕೋಣಗಳು ಕಾಣಿಸಿಕೊಂಡಿರುವುದು ಜನರನ್ನು ಆತಂಕದ ಸುಳಿಗೆ ದೂಡಿದೆ.
ಅರಣ್ಯ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಈ ಕಾಡುಕೋಣಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕು
ಹಾಗೂ ರೈತರ ಜೀವ ಮತ್ತು ಬೆಳೆಗೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



