ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಕಾಂಗ್ರೆಸ್ ಪಕ್ಷ ಭಾರೀ ಸೋಲು ಅನುಭವಿಸಿದೆ. ಒಟ್ಟು 13 ನಿರ್ದೇಶಕ ಸ್ಥಾನಗಳಲ್ಲಿ 11 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡರೆ, ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಕಾಂಗ್ರೆಸ್‍ಗೆ ಈ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿದೆ.
ಚುನಾವಣೆಯಲ್ಲಿ ಹಾಲಿ ಕಡೂರಿನ ಕಾಂಗ್ರೆಸ್ ಶಾಸಕ ಕೆ.ಎಸ್. ಆನಂದ್ ಅವರಿಗೆ ಭಾರೀ ಸೋಲಾಗಿದೆ. ಕೊಪ್ಪದ ಬಿಜೆಪಿ ಮುಖಂಡ ದಿನೇಶ್ ಹೊಸೂರು ವಿರುದ್ಧ ಪರಾಭವಗೊಂಡಿದ್ದಾರೆ. ವ್ಯವಸಾಯೋತ್ಪನ್ನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಕೆ.ಎಸ್. ಆನಂದ್ ಸೋಲನುಭವಿಸಿದ್ದಾರೆ. ಜಿಲ್ಲೆಯಲ್ಲಿ ಐದು ಕಾಂಗ್ರೆಸ್ ಶಾಸಕರಿದ್ದರೂ ಸಹ ಸಹಕಾರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ತೀವ್ರ ಸೋಲು ಕಂಡಿರುವುದು ಕಾಂಗ್ರೆಸ್‍ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಸಹಕಾರ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೂ ಈ ಚುನಾವಣೆಯಲ್ಲಿ ಸೋಲಾಗಿದೆ. ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ಗಳ ಸಹಕಾರ ಸಂಘ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿಯವರು ಗಮನಾರ್ಹ ಮತಗಳನ್ನು ಪಡೆದರೂ ಸೋಲನುಭವಿಸಿದ್ದಾರೆ.
ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‍ನಲ್ಲಿ ನಡೆದ ಮತ ಎಣಿಕೆ ವೇಳೆ ತೀವ್ರ ಕುತೂಹಲ ನಿರ್ಮಾಣವಾಗಿತ್ತು. ಪ್ರಮುಖ ಹೋರಾಟದಲ್ಲಿ ಚಿಕ್ಕಮಗಳೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ 2 ಸ್ಥಾನಗಳಿಗೆ ಸಿ.ಟಿ.ರವಿ, ಎಸ್.ಎಲ್. ಬೋಜೇಗೌಡ ಅವರು ಜಯ ಸಾಧಿಸಿದ್ದಾರೆ. ಮತ ಎಣಿಕೆಯ ಫಲಿತಾಂಶದಲ್ಲಿ ಸಿ.ಟಿ. ರವಿಯವರಿಗೆ 27 ಮತಗಳು, ಎಸ್.ಎಲ್. ಭೋಜೇಗೌಡ ಅವರಿಗೆ 30 ಮತಗಳು ಲಭಿಸಿದರೆ, ಬಿಜೆಪಿ ರೆಬಲ್ ಅಭ್ಯರ್ಥಿ ನಿರಂಜನ್ ಅವರಿಗೆ 5 ಮತಗಳು ಮಾತ್ರ ದೊರಕಿವೆ.
- ಚಿಕ್ಕಮಗಳೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ 2 ಸ್ಥಾನ
ಎಸ್.ಎಲ್. ಭೋಜೇಗೌಡ – 30 ಮತ ಗೆಲುವು
ಸಿ.ಟಿ. ರವಿ – 27 ಮತ ಗೆಲುವು
ಎಂ.ಎಸ್. ನಿರಂಜನ್ – 05 ಮತ ಸೋಲು
- ಕೊಪ್ಪ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ 1 ಸ್ಥಾನ
ಬಿ.ಎಸ್. ಸತೀಶ್ -06 ಮತ ಗೆಲುವು
ಪ್ರಜ್ವಲ್ -05 ಮತ ಸೋಲು
ಕೆ.ಎಸ್. ರವೀಂದ್ರ -00 ಮತ ಸೋಲು
ಅಸಿಂಧು -01 ಮತ
- ಜಿಲ್ಲೆಯ ಎಲ್ಲಾ ಟಿಎಪಿಸಿಎಂಎಸ್ ಕ್ಷೇತ್ರಗಳಿಂದ 1 ಸ್ಥಾನ
ದಿನೇಶ್ ಹೊಸೂರು-04 ಮತ ಗೆಲುವು
ಕೆ.ಎಸ್. ಆನಂದ್-03 ಮತ ಸೋಲು
- ಜಿಲ್ಲೆಯ ಎಲ್ಲಾ ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮತ್ತು ಪಟ್ಟಣ ಸಹಕಾರ ಹಾಗೂ ಇನ್ನಿತರೆ ಎಲ್ಲಾ ಸಹಕಾರ ಕ್ಷೇತ್ರದ 1 ಸ್ಥಾನ
ಟಿ.ಎಲ್. ರಮೇಶ್-56 ಮತ ಗೆಲುವು
ಎಂ.ಪಿ. ಕುಮಾರಸ್ವಾಮಿ-38 ಮತ ಸೋಲು
ಒಟ್ಟು 13 ನಿರ್ದೇಶಕರ ಸ್ಥಾನಗಳಲ್ಲಿ 8 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 5 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿತ್ತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಚಿಕ್ಕಮಗಳೂರು ನಗರದ ಡಿಸಿಸಿ ಬ್ಯಾಂಕ್ ಎದುರು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಕಳೆದ ಹಲವು ದಶಗಳಿಂದ ಬಿಜೆಪಿ ತನ್ನ ಪಾರಮ್ಯವನ್ನು ಮೆರೆಯುತ್ತಿದ್ದು, ಇದೀಗ ಜೆಡಿಎಸ್ ನೊಂದಿಗೆ ಮೈತ್ರಿಮಾಡಿಕೊಂಡು ಡಿಸಿಸಿ ಬ್ಯಾಂಕ್ ನ ಎಲ್ಲಾ ನಿರ್ದೇಶಕ ಸ್ಥಾನಗಳಲ್ಲಿ ಮೈತ್ರಿಕೂಟ ಗೆಲುವು ಸಾಧಿಸಿದೆ.
ಕಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಬೆಳ್ಳಿಪ್ರಕಾಶ್ ಮತ್ತು ಎಸ್.ವಿ. ಬಸವರಾಜಪ್ಪ, ತರೀಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಡಿ.ಎಸ್. ಸುರೇಶ್ ಮತ್ತು ಕೆ.ಆರ್.ಆನಂದಪ್ಪ ಮೂಡಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹೆಚ್.ಬಿ. ಶಿವಣ್ಣ ಹಳಸೆ, ಶೃಂಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹೆಚ್.ಕೆ. ದಿನೇಶ್ ಹೆಗ್ಡೆ, ಎನ್.ಆರ್.ಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಜಯಪಾಲ್ ಕೆ.ಸಿ., ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘ ಕ್ಷೇತ್ರದಿಂದ ಸೋನಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದೆ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಹಾಲಿ ಅಧ್ಯಕ್ಷರಾಗಿದ್ದ ತರೀಕೆರೆ ಮಾಜಿ ಶಾಸಕ ಡಿ.ಎಸ್.ಸುರೇಶ್, ಹಿರಿಯ ಸಹಕಾರಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೂಡಿಗೆರೆಯ ಹಳಸೆ ಶಿವಣ್ಣ, ತರೀಕೆರೆಯ ಕೆ.ಆರ್. ಆನಂದಪ್ಪ, ಕಡೂರು ಮಾಜಿ ಶಾಸಕ ಬೆಳ್ಳಿಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಲ್.ಎಲ್.ಬೋಜೇಗೌಡ ಸೇರಿದಂತೆ ಘಟಾನುಘಟಿ ನಾಯಕರು ನಿರ್ದೇಶಕರಾಗಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಲಾಭಿ ಮತ್ತು ಪೈಪೋಟಿ ನಡೆಯುವ ಸಾಧ್ಯತೆಯಿದೆ.



