ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರರಾವ್ ತಮ್ಮ ಕಚೇರಿಯಲ್ಲೇ ಮಹಿಳೆಯರ ಜೊತೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋ ಜೊತೆ ಆಡಿಯೋ ಕೂಡ ವೈರಲ್ ಆಗಿದೆ.
ಮಹಿಳೆಯೊಂದಿಗಿನ ರಾಸಲೀಲೆ ವಿಡಿಯೋ ವೈರಲ್ ಬೆನ್ನಲ್ಲೇ ಡಿಜಿಪಿ ಡಾ.ರಾಮಚಂದ್ರರಾವ್ ಅವರು 10 ದಿನ ರಜೆ ಹಾಕಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಮತ್ತೊಂದೆಡೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ರಾಮಚಂದ್ರರಾವ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ರಾಮಚಂದ್ರ ರಾವ್ ಸಮವಸ್ತ್ರದಲ್ಲಿರುವಾಗಲೇ ತಮ್ಮ ಕಚೇರಿಯ ಒಳಗಡೆಯೇ ಮಹಿಳೆಯನ್ನು ತಬ್ಬಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದ್ದು, ಇದು 1 ವರ್ಷದ ಹಿಂದೆ ಸೆರೆಯಾಗಿದ್ದ ವಿಡಿಯೋ ಎನ್ನಲಾಗಿದೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ವಿಡಿಯೋ ಬಗ್ಗೆ ನನಗೆ ಬೆಳಗ್ಗೆಯಷ್ಟೇ ಗೊತ್ತಾಗಿದೆ. ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಿದ್ದೇನೆ ಎಂದಿದ್ದರು.
ಈ ಹಿಂದೆ ತಮ್ಮ ಮಲಮಗಳು, ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಹಕರಿಸಿದ್ದಾರೆ ಎಂಬ ಆರೋಪದ ಮೇಲೆ ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ನಂತರ ಅವರನ್ನು ರಾಜ್ಯ ಸರ್ಕಾರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಮರು ನೇಮಕ ಮಾಡಿತ್ತು.
ಸಮವಸ್ತ್ರದಲ್ಲಿರುವಾಗಲೇ ರಾಮಚಂದ್ರರಾವ್ ತನ್ನ ಕಚೇರಿಯ ಒಳಗಡೆಯೇ ಮಹಿಳೆಯನ್ನು ತಬ್ಬಿಕೊಂಡಿದ್ದಾರೆ. 4-5 ತಿಂಗಳಲ್ಲಿ ರಾಮಚಂದ್ರ ರಾವ್ ಪೊಲೀಸ್ ಇಲಾಖೆಯಿಂದ ನಿವೃತ್ತರಾಗಲಿದ್ದರು. ನಿವೃತ್ತರಾಗುವ ಸಮಯದಲ್ಲೇ ಅವರು ರಹಸ್ಯ ಕ್ಯಾಮೆರಾದ ಮುಂದೆ ಬೆತ್ತಲಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮಚಂದ್ರ ರಾವ್ ಗೊಂದಲಕಾರಿ ಹೇಳಿಕೆ ಕೊಟ್ಟಿದ್ದಾರೆ. ನನಗೆ ಇದು ಗೊತ್ತಿಲ್ಲ, ಯಾರೋ ಎಐ ಮೂಲಕ ಷಡ್ಯಂತ್ರ ಮಾಡಿದ್ದಾರೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರೆ ಮತ್ತೊಂದು ಕಡೆ 8 ವರ್ಷಗಳ ಹಿಂದಿನ ಹಳೇವಿಡಿಯೋ ಎಂದು ಹೇಳಿದ್ದಾರೆ. ಹೀಗಾಗಿ ಡಿಜಿಪಿ ಹೇಳಿಕೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.
ವಿಡಿಯೋ ಹೊರ ಬೀಳುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ಯತ್ನಿಸಿದರು. ಆದರೆ ಮನೆಯಲ್ಲಿದ್ದರೂ ಪರಮೇಶ್ವರ್ ಅವರು ರಾಮಚಂದ್ರ ರಾವ್ ಅವರ ಭೇಟಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ರಾಮಚಂದ್ರರಾವ್ 10 ದಿನ ಕಡ್ಡಾಯ ರಜೆ ಮೇಲೆ ತೆರಳಿದ್ದಾರೆ.



