ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕರ ವೃತ್ತಿ ಸಂಕಷ್ಟದಲ್ಲಿದ್ದು, ಭವಿಷ್ಯದಲ್ಲಿ ಇದರಿಂದ ವೃತ್ತಿಬಾಂಧವರು ವಿಚಲಿತರಾಗುತ್ತಿದ್ದಾರೆಂದು. ಈ ನಿಟ್ಟಿನಲ್ಲಿ ವೃತ್ತಿಬದುಕಿಗೆ ಸಹಕಾರಿಯಾಗುವಂತೆ ಆಗ್ರಹಿಸಿ ಜಿಲ್ಲಾ ಛಾಯಾಗ್ರಾಹಕರ ಸಂಘ ಮತ್ತು ತಾಲೂಕು ಸಂಘದ ವತಿಯಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿ ನೀಡಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಯಚಂದ್ರ ಬಿ.ಕೆ ಅವರು, ಆರು ತಿಂಗಳು ಕೆಲಸವಿಲ್ಲದೆ ತಮ್ಮ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದ್ದು, ಅತೀ ಕಡಿಮೆ ಮದುವೆ ಶುಭಸಮಾರಂಭಗಳು ಲಭ್ಯವಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಲು ಸ್ಥಳೀಯ ಗಿರಿಶ್ರೇಣಿ ದೇಶದಲ್ಲೇ ಪ್ರಖ್ಯಾತಿಯಾಗಿದ್ದು, ಇಲ್ಲಿಗೆ ಹೋಗಲು ಚೆಕ್‍ಪೋಸ್ಟ್‍ನಲ್ಲಿ ಪ್ರವೇಶ ಸಿಗದೆ ನಿರಾಸೆಯಿಂದ ವಾಪಾಸ್ಸಾಗುತ್ತಿರುವುದರಿಂದ ನಮ್ಮ ವೃತ್ತಿ ಬದುಕಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದರು.
ಸ್ಥಳೀಯ ಛಾಯಾಗ್ರಾಹಕರಿಗೆ ಹಾಗೂ ಸಂಘದ ಗುರುತಿನ ಚೀಟಿ ಪಡೆದಿರುವ ಸದಸ್ಯರಿಗೆ ಆನ್‍ಲೈನ್ ಎಂಟ್ರಿ ನೋಡದೆ ನಮ್ಮ ಗುರುತಿನ ಚೀಟಿಯನ್ನೇ ಆಧರಿಸಿ ಗಿರಿಭಾಗದ ಪ್ರಕೃತಿ ಸೌದರ್ಯವನ್ನು ಪ್ರೀ ವೆಡ್ಡಿಂಗ್ ಶೂಟ್‍ನಲ್ಲಿ ಚಿತ್ರೀಕರಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.
ಜೊತೆಗೆ ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಹಾಗೂ ಜಿಲ್ಲಾಧ್ಯಂತ ಎಲ್ಲಾ ಸಮುದಾಯ ಭವನ ಮತ್ತು ಮದುವೆ ಛತ್ರಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವಂತೆ ಆಗ್ರಹಿಸಿದರು. ಕಾರಣ ಇತ್ತೀಚಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ಬೆಲೆಬಾಳುವ ಕ್ಯಾಮರಾಗಳು ಕಳವಾಗುತ್ತಿದ್ದು, ಈ ಪ್ರಕರಣಗಳನ್ನು ತಡೆಯುವ ಸಲುವಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ವೃತ್ತಿಬಾಂಧವರಿಗೆ ನೆರವಾಗಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರೊಂದಿಗೆ ತಾಲ್ಲೂಕು ಅಧ್ಯಕ್ಷ ಶಿವು, ಜಿಲ್ಲಾ ಕಾರ್ಯದರ್ಶಿ ರೇಣುಕಪ್ಪ, ತಾಲ್ಲೂಕು ಕಾರ್ಯದರ್ಶಿ ಲಕ್ಷ್ಮಿಕಾಂತ, ಖಜಾಂಚಿ ರುದ್ರೇಶ್, ಕಾರ್ಗಿಲ್ ಸೋಮಶೇಖರ್, ಸುರೇಶ್, ಹರೀಶ್, ರಮೇಶ್, ಸಂತೋಷ್, ಲೋಹಿತ್, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.



