ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಸರಸ್ವತಿ ಪೂಜೆ ಹಾಗೂ ಸಾಧನ ಸಮಾರಂಭದ ಅಂಗವಾಗಿ ‘ಜಾವಳಿ ಕಲಾ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮೂಡಿಗೆರೆ ತಹಸಿಲ್ದಾರ್ ಅಶ್ವಿನಿ ಅವರು ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ಅವರು ಮಾತನಾಡಿ, ಶಿಕ್ಷಣವೆಂದರೆ ಕೇವಲ ಪಠ್ಯಾಧ್ಯಯನಕ್ಕೆ ಸೀಮಿತವಾಗಿರಬಾರದು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ, ಸಂಸ್ಕಾರ, ಶಿಸ್ತು ಹಾಗೂ ಆತ್ಮವಿಶ್ವಾಸವನ್ನು ಹೊರತರುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ವೇದಿಕೆಗಳು ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಬಲ ನೀಡುತ್ತವೆ ಎಂದು ಹೇಳಿದರು. ಶಿಕ್ಷಕರು, ಪೋಷಕರು ಹಾಗೂ ಸಮಾಜ ಒಟ್ಟಾಗಿ ಕೈಜೋಡಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ. ಪ್ರದೀಪ್ ಹಾಗೂ ಶಾಲಾಭಿವೃದ್ಧಿ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ನಂದಿನಿ, ಬಾಳೂರು ಹೋಬಳಿ ಬಿಜೆಪಿ ಅಧ್ಯಕ್ಷ ಬಿ.ಬಿ ಮಂಜುನಾಥ್, ಬಿಜೆಪಿ ಮುಖಂಡರಾದ ಪರೀಕ್ಷಿತ್ ಜಾವಳಿ ಹಾಗೂ ಜೆರಾಲ್ಡ್ ಪೆರೇರಾ ಉಪಸ್ಥಿತರಿದ್ದರು.
ಪಿ.ಎಂ. ಘೋಷಣ ಸಹಾಯಕ ನಿರ್ದೇಶಕ ಹೇಮಂತ್ ಚಂದ್ರ, ಪಿಡಿಓ ದುಗ್ಗಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ್ ಮತ್ತು ವೆಂಕಟೇಶ್ ಮೂರ್ತಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಶೌರ್ಯ ವಿಪತ್ತು ನಿರ್ವಹಣಾ ಘಟಕದ ಚಂದ್ರಶೇಖರ್, ಎಂ.ಟಿ. ಮಂಜುನಾಥ್, ರೆವಿನ್ಯೂ ಇನ್ಸ್ಪೆಕ್ಟರ್ ಬಾಬು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಾಲೆಯ ಮುಖ್ಯ ಶಿಕ್ಷಕ ದಿನೇಶ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕರಾದ ಆದಿತ್ಯ, ಗಂಗಮ್ಮ, ಸ್ವೀಕ್ರತಿ, ಸೃಷ್ಟಿ ಹಾಗೂ ಬಿ.ಎಸ್. ಸುರೇಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನೃತ್ಯ, ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಯ ಎಲ್ಲಾ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಕ ಧರ್ಮಸ್ಥಳ ಗ್ರಾಮೀಣ ಯೋಜನೆಯ ಪ್ರತಿನಿಧಿಗಳು, ಆಟೋ ಚಾಲಕರು ಹಾಗೂ ಮಾಲೀಕರು, ಗ್ರಾಮಗಳ ಗ್ರಾಮಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



