ಅತ್ಯುನ್ನತ ಜೀವನ ಮೌಲ್ಯಗಳನ್ನು ಹೊಂದಿದ ಅಪರೂಪದ ಸಂಸ್ಕೃತಿ ನಮ್ಮದಾಗಿದ್ದು, ಸತ್ಯ ಒಂದೆ, ಮಾರ್ಗಗಳು ಅನೇಕ ಎಂಬುದನ್ನು ತಿಳಿಯಬೇಕಾಗಿದೆ. ಇಂಥಹಾ ಉತ್ಸವಗಳು ದೇಶದ ಉಳಿವಿನ ಹೋರಾಟ ಲಕ್ಷಣದ ಸಂಕೇತವಾಗಿದ್ದು, ಯಾರು ತಮ್ಮ ಸಂಪ್ರದಾಯದ ತಾಯಿ ಬೇರನ್ನು ನಂಬುತ್ತಾರೋ ಅವರು ನಿಜವಾದ ಭಾರತೀಯರೆನಿಸಿಕೊಳ್ಳುತ್ತಾರೆ. ಮುಂದಿನ ಯುವ ಜನಾಂಗ ಪ್ರಾಚೀನ ಹಿಂದೂ ಧರ್ಮದ ಉಳಿವಿಗಾಗಿ ಧೃಡ ಸಂಕಲ್ಪ ತೊಡಬೇಕಾದ ಅಗತ್ಯವಿದ್ದು, ಒಂದು ಸಂಸ್ಕಾರ, ಒಂದು ಶಿಕ್ಷಣ ಜಾರಿಗೆ ಬರಬೇಕಾಗಿದೆ ಎಂದು ಕೊಪ್ಪ ತಾಲೂಕು ಹರಿಹರಪುರದ ಸ್ವಯಂ ಪ್ರಕಾಶ ಶ್ರೀ ಸಚ್ಚಿದಾನಂದ ಶ್ರೀಗಳು ಹೇಳಿದರು.
ಜಯಪುರ ಪಟ್ಟಣದಲ್ಲಿ ಕೊಪ್ಪ ಹಿಂದೂ ಸಮಾಜೋತ್ಸವ ಸಮಿತಿ ಜಯಪುರ ಮಂಡಲದ ವತಿಯಿಂದ ಭಾನುವಾರ ನಡೆದ ಹಿಂದೂ ಸಮಾಜೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯು ಮೂಲಭೂತ ನಂಬಿಕೆ, ವೈವಿಧ್ಯ, ಬಹುತ್ವವನ್ನು ಪ್ರಕೃತಿಯ ಆರಾಧನೆಯನ್ನು ಸಹಜಾವಾಗಿ ಒಪ್ಪಿಕೊಂಡಿದೆ. ಭಾರತೀಯತೆಗೆ ಘನವಾದ ಉದಾತ್ತ, ಪರಂಪರೆ, ಇತಿಹಾಸವಿದ್ದು, ಒಂಭತ್ತು ದರ್ಶನ ಶಾಸ್ತ್ರಗಳನ್ನು ನೀಡಿ ಬಹುರೂಪ ಚಿಂತನೆಗೆ ಅವಕಾಶ ಮಾಡಿಕೊಟ್ಟಿದೆ. ಭಾರತೀಯ ಸನಾತನ ಧರ್ಮಕ್ಕೆ ಲಕ್ಷ ವರ್ಷಗಳ ಪುರಾಣೇತಿಹಾಸವಿದ್ದು, ಆಳುವ ಸರಕಾರಗಳು ಪಕ್ಷಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಧರ್ಮವನ್ನು ಒಡೆಯುವ ಕೆಲಸ ಮಾಡಬಾರದು ಎಂದರು.
ಹಿಂದೂ ಸಮಾಜೋತ್ಸವ ಸಮಿತಿ ಉಪಾಧ್ಯಕ್ಷ ಎಂ.ಆರ್.ರಂಗನಾಥ್, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಿಗಸೆ ಮಾಲತೇಶ್, ಕೊಪ್ಪದ ಉದ್ಯಮಿ ಸುಬ್ರಹ್ಮಣ್ಯ ಶೆಟ್ಟಿ, ಹರಿಹರಪುರ ಪ್ರಭೋದಿನಿ ಗುರುಕುಲದ ಉಮೇಶ್, ಅಧ್ಯಕ್ಷತೆ ವಹಿಸಿದ್ದ ಮಳಿಗೆ ಚಂದ್ರಶೇಖರ್, ಆರ್‍ಎಸ್‍ಎಸ್ ಜಿಲ್ಲಾ ಮಾರ್ಗದರ್ಶಕ ಟಿ.ಕೆ.ನಾರಾಯಣ್, ಮುಖಂಡರುಗಳಾದ ಸಿ.ಕೆ.ಪ್ರಭಾಕರ್, ಮನೋಹರ್, ಮತ್ತಿತರರು ಹಾಜರಿದ್ದರು. ಎರಡುವರೆ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.
ಮಕ್ಕಳ ಛದ್ಮವೇಷ, ಸ್ತಬ್ಧಚಿತ್ರಗಳು ಗಮನ ಸೆಳೆದವು. ಪಟ್ಟಣದ ಶ್ರೀ ಭಕ್ತಾಂಜನೇಯ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯು ವಿವಿಧ ಜಾನಪದ ಕಲಾ ತಂಡಗಳ ಜತೆ ಮುಖ್ಯರಸ್ತೆಯಲ್ಲಿ ಸಾಗಿ ವೇದಿಕೆ ತಲುಪಿತು. ಗಜೇಂದ್ರ ಪ್ರಾರ್ಥಿಸಿ, ಗಣೇಶ ಶಾಸ್ತ್ರಿ ಸ್ವಾಗತಿಸಿದರು. ನರೇಂದ್ರ ಪ್ರಾಸ್ಥಾವಿಕ ಮಾತನಾಡಿ, ಸುಧಾಕರ್ ವಂದಿಸಿದರು.
ಕಾರ್ಕಳದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಸ್ವಾಭಿಮಾನಿ ಸಮಾಜವನ್ನು ಕಟ್ಟಬೇಕಾದರೆ ಹಿರಿಯರು ನಡೆದ ಹೆಜ್ಜೆ ಗುರುತುಗಳನ್ನು ಅನುಸರಿಸಬೇಕಾದ ಅಗತ್ಯವಿದ್ದು, ಹಿಂದೂ ನಾಗರಿಕತೆಯ ಆಧಾರದಲ್ಲಿ ನಾವು ಸ್ವಭೋದ ಶಕ್ತಿಯನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.
ಸಮಾಜೋತ್ಸವದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದ ಅವರು, ನಾವು ಭಾರತ ಮಾತೆಗೆ ಅರ್ಪಣೆಯಾದರೆ ದೇಶ ಅಜರಾಮರವಾಗುತ್ತದೆ. ಕುಟುಂಬ ಪದ್ಧತಿ ಮರು ಸ್ಥಾಪನೆಯಾಗಬೇಕಾದ ಅಗತ್ಯವಿದ್ದು, ಜನರಲ್ಲಿ ರಾಷ್ಟ್ರಭಕ್ತಿ, ಭಾರತೀಯತೆಯನ್ನು ಹೆಚ್ಚಿಸುವಂತೆ ಮಾಡಿದ ಕೀರ್ತಿ ಆರ್‍ಎಸ್‍ಎಸ್ ಗೆ ಸಲ್ಲುತ್ತದೆ. ನಾಗರಿಕತೆಯ ತೊಟ್ಟಿಲನ್ನು ತೂಗಿದ ಆದ್ಯ ಪ್ರವರ್ತಕರು ನಾವಾಗಿದ್ದು, ಜಾತಿಯನ್ನು ಮೀರಿದ ಸಮಾಜ ನಿರ್ಮಾಣ ನಮ್ಮದಾಗಬೇಕು ಎಂದರು.



