February 12, 2026

 

 

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ತನ್ನ 40 ರ ಸಂಭ್ರಮದ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಿಗೆ ಚಿಕ್ಕಮಗಳೂರು ನಗರದ ಎ.ಐ.ಟಿ ವೃತ್ತದ ಬಳಿ ಇರುವ ಒಕ್ಕಲಿಗರ ಭವನದಲ್ಲಿ ಸೋಮವಾರ ಅದ್ದೂರಿ ಚಾಲನೆ ದೊರೆಯಿತು.

ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ ಭಕ್ತಿ ಭಂಡಾರಿ ಬಸವಣ್ಣನವರು ಹೇಳಿರುವ ಸಪ್ತ ಸೂತ್ರಗಳನ್ನು ನಾವೆಲ್ಲರೂ ಅಳವಡಿಸಿಕೊಂಡರೆ ಜಗತ್ತಿನ ಕಲ್ಯಾಣ ವಾಗುತ್ತದೆ, ಅವುಗಳನ್ನು ಪಾಲಿಸುವುದು ಕಷ್ಟ ಸಾಧ್ಯವಾದರೂ ಸಹ ಬಿಡದೇ ಪಾಲಿಸಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸಮಾಜ ಪರಿವರ್ತನೆಗೆ ಶರಣ ಚಳುವಳಿಯೇ ಪರಿಹಾರ, ಭಕ್ತಿ ಭಂಡಾರಿ ಬಸವಣ್ಣನವರು ಹೇಳಿರುವ ಕಳಬೇಡ ಕೊಲಬೇಡ ಸಪ್ತ ಸೂತ್ರಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಸಮಾಜದ ಪರಿವರ್ತನೆಯಾಗುತ್ತದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿಗೆ 40 ರ ಸಂಭ್ರಮವಾದರೆ ಶರಣ ಚಳುವಳಿಗೆ 9 ಶತಮಾನಗಳ ಇತಿಹಾಸವಿದೆ, ವ್ಯವಸ್ಥೆಯ ಪರಿವರ್ತನೆಗೆ ಅಧಿಕಾರ ಬಳಕೆಯಾಗಬಹುದು, ಆದರೆ ಸಮಾಜದ ಪರಿವರ್ತನೆಗೆ ಶರಣ ಚಳುವಳಿಯೇ ಪರಿಹಾರ ಎಂದು ಹೇಳಿದರು ತಿಳಿಸಿದರು.

ಭಕ್ತಿ ಭಂಡಾರಿ ಬಸವಣ್ಣನವರು ಮತ್ತು 12ನೇ ಶತಮಾನದ ಶಿವಶರಣರ ಆಶಯದಂತೆ ನಾವೆಲ್ಲರೂ ನಡೆ ನುಡಿಯನ್ನು ಒಂದಾಗಿ ಮಾಡಿಕೊಂಡು ಶರಣ ಚಳುವಳಿಯನ್ನು ಮುನ್ನಡೆಸಬೇಕಾಗಿದೆ ಎಂದು ತಿಳಿಸಿದರು.

ಆಶಯ ನುಡಿಗಳನ್ನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ. ತಿಪ್ಪೇರುದ್ರಪ್ಪ ಭಕ್ತಿ ಭಂಡಾರಿ ಬಸವಣ್ಣನವರು ವೀರಶೈವರೂ ಅಲ್ಲ, ಬ್ರಾಹ್ಮಣರೂ ಅಲ್ಲ, ಅವರೊಬ್ಬ ಮನುಷ್ಯ ಕುಲದ ಶ್ರೇಷ್ಠ ವ್ಯಕ್ತಿ, ಅಂತಹ ಮಹಾನ್ ವ್ಯಕ್ತಿಯನ್ನು ಒಂದು ಜಾತಿಗೆ ಕಟ್ಟಿ ಹಾಕಬಾರದು, ಬಸವಣ್ಣನವರು ಇಂದು ದೈಹಿಕವಾಗಿ ಇಲ್ಲ ಆದರೆ ಅವರ ಆದರ್ಶಗಳು ಇಂದಿಗೂ ಜೀವಂತವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಸವ ತತ್ವ ಪೀಠದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಸುತ್ತೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಸ್ಥಾಪಿಸಿದ ಶರಣ ಸಾಹಿತ್ಯ ಪರಿಷತ್ತು 40 ವರ್ಷಗಳಿಂದ ಇಡೀ ನಾಡಿನಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಶರಣ ತತ್ವ ಪ್ರಸಾರ ಮಾಡುತ್ತಿದೆ ಎಂದರು. ಅಂದು ಹಿರಿಯ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಸ್ವಾಮೀಜಿಗಳು ಶರಣ ಸಾಹಿತ್ಯ ಪರಿಷತ್ತಿನ ಮೂಲಕ ನಾಡಿನಲ್ಲಿ ನಿರಂತರವಾಗಿ ಬಸವ ತತ್ವವನ್ನು ಬಿತ್ತುತ್ತಿದ್ದಾರೆ ಎಂದು ಹೇಳಿದರು. ಭಕ್ತಿ ಬಂಡಾರಿ ಬಸವಣ್ಣನವರ ಸಪ್ತ ಸೂತ್ರಗಳನ್ನು ಪ್ರಪಂಚದ ಎಲ್ಲಾ ದಾರ್ಶನಿಕರು ಹೇಳಿದ್ದಾರೆ ಅವುಗಳನ್ನು ಅಷ್ಟೂ ಜನ ಸಂತರು ಹೇಳಿದರೂ ಇನ್ನೂ ಯಾಕೆ ಮತ್ತೆ ಮತ್ತೆ ಅವುಗಳನ್ನು ಹೇಳುವ ಪರಿಸ್ಥಿತಿ  ಬಂತು ಎಂದು ಎಲ್ಲರೂ ಪದೇ ಪದೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಸಿ. ಸೋಮಶೇಖರ್ 12ನೇ ಶತಮಾನದ ಶಿವಶರಣರು ವಚನಗಳನ್ನು ಶರಣ ಸಾಹಿತ್ಯವನ್ನು ಲೋಕಕಲ್ಯಾಣಕ್ಕಾಗಿ, ಸಮಾಜದ ಸುಧಾರಣೆಗಾಗಿ, ಸಾಮಾಜಿಕ ಪರಿವರ್ತನೆಗಾಗಿ ರಚಿಸಿದರು, ಅವರ ವಿಚಾರಧಾರೆಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಒಕ್ಕಲಿಗರ ಭವನದ ಆವರಣದಲ್ಲಿ ಪುಸ್ತಕ ಮಳಿಗೆಯನ್ನು ಉದ್ಘಾಟಿಸಲಾಯಿತು, ಬೆಳವಾಡಿಯ ಶ್ರೀ ಬಸವೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆಯಿತು, ಶರಣ ಸಾಹಿತ್ಯ ಪರಿಷತ್ತಿನ ಲಾಂಛನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಶಾಸಕ ಎಚ್.ಡಿ. ತಮ್ಮಯ್ಯ, ಮಾಜಿ ಶಾಸಕ ಬಿ.ಬಿ. ನಿಂಗಯ್ಯ, ಭದ್ರಾ ಕಾಡ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು, ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ವೀರೇಶ್, ತಾಲೂಕು ಅಧ್ಯಕ್ಷ ಲೋಕೇಶಪ್ಪ, ಕಾಂಗ್ರೆಸ್ ಮುಖಂಡ ಮಹಡಿಮನೆ ಸತೀಶ್, ಬಿ ಎಸ್ ಪಿ ಜಿಲ್ಲಾಧ್ಯಕ್ಷ ಪರಮೇಶ್ ಉಪಸ್ಥಿತರಿದ್ದರು.

ಶರಣ ಸಾಹಿತ್ಯ ಪರಿಷತ್ತಿನ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ