ಚಿಕ್ಕಮಗಳೂರು ತಾಲ್ಲೂಕು ಆವತಿ ಪ್ರೌಢಶಾಲೆಯ ಆವರಣದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಸೋಮವಾರ ಬಹು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದ ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ; ಹಿಂದೂ ಧರ್ಮ ಉಳಿಯಬೇಕಾದರೆ ಸಮಾಜದಲ್ಲಿನ ಜಾತೀಯತೆಯ ತಾಯಿಬೇರೆನ್ನು ಕಿತ್ತೆಸೆ ಬೇಕು. ಹೆಣ್ಣಿಗೆ ಪಾವಿತ್ರತೆಯನ್ನು ನೀಡಿದ ಧರ್ಮ ಈ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಹಿಂದೂ ಧರ್ಮ ಎಂದರು. ದೇವನೊಬ್ಬ ನಾಮ ಹಲವು ಎನ್ನುವಂತೆ ಎಲ್ಲರೂ ಬೇರೆ ಬೇರೆ ದೇವರನ್ನು ಆರಾಧಿಸಿದರು ಎಲ್ಲಾ ದೇವರು ಒಂದೇ ಎಂದು ಪ್ರತಿಪಾದಿಸಿದರು.
ಸಮಾಜದಲ್ಲಿ ಮೇಲು ಕೀಳೆಂಬ ಭಾವನೆ ತೊಲಗಬೇಕು, ಎಲ್ಲರನ್ನು ನಾವು ಸರಿಸಮಾನವಾಗಿ ನೋಡಬೇಕು, ನಮ್ಮ ಆಚಾರ ವಿಚಾರಗಳು, ಉಡುಗೆ-ತೊಡುಗೆಗಳು ನಮ್ಮ ಸಂಪ್ರದಾಯವನ್ನು ಪ್ರತಿಬಿಂಬಿಸುವಂತಿರಬೇಕು, ಇಂದು ಕುಟುಂಬ ಸಂಬಂಧಗಳು ದೂರಾಗುತ್ತಿವೆ ಆಧುನಿಕತೆಯ ಭರಾಟೆಯಲ್ಲಿ ಧರ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದರು. ಬೊಗಳೆ ಬಿಡುವ ರಾಜಕಾರಿಣಿಗಳಿಗೆ ಮತ ನೀಡದೆ, ಅಭಿವೃದ್ಧಿ ಮಾಡುವ ಚಿಂತನೆಯುಳ್ಳವರಿಗೆ ಯೋಚಿಸಿ ಮತ ನೀಡಿ, ನಿಮ್ಮ ಮತ ಮಾರಾಟವಾಗಬಾರದು ಎಂದರು. ರಾಮ, ಅಂಬೇಡ್ಕರ್ ಹೆಸರೇಳಿಕೊಂಡು ರಾಜಕಾರಣ ಮಾಡುವುದು ಸರಿಯಲ್ಲ, ಅಭಿವೃದ್ಧಿ ರಾಜಕಾರಣವಾಗಬೇಕು ಎಂದರು.
ಬಡವರ ಕಲ್ಯಾಣಕ್ಕಾಗಿ ನಮ್ಮ ಆಶ್ರಮ ಸದಾ ಸಿದ್ಧವಿದ್ದು, ಬಡವರ ಮದುವೆ ಕಾರ್ಯಗಳಿಗೆ ಸಹಾಯ ಮಾಡುವುದಾಗಿ ತಿಳಿಸಿದರು. ಯಾವ ದೇವರು ಚಿನ್ನ ಬೆಳ್ಳಿ ವಜ್ರ ವೈಡೂರ್ಯಗಳನ್ನು ಕೇಳುವುದಿಲ್ಲ ದೇವಸ್ಥಾನದ ಸಮಿತಿಗಳು ಬಡವರ ಕಲ್ಯಾಣಕ್ಕಾಗಿ ಒಂದಷ್ಟು ನಿಧಿಯನ್ನು ಮೀಸಲಿಟ್ಟರೆ ಸಮಾಜದಲ್ಲಿ ದುರ್ಬಲ ವರ್ಗದವರ ಏಳಿಗೆ ಸಾಧ್ಯ ಎಂದರು. ಉಳ್ಳವರು ಇಲ್ಲದವರ ಬಗ್ಗೆನೂ ಸ್ವಲ್ಪ ಕಾಳಜಿ ವಹಿಸಬೇಕೆಂದರು. ಮೂಢನಂಬಿಕೆಗಳನ್ನು ಸಮಾಜದಿಂದ ತೊಲಗಿಸಿ ಎಂದು ಕರೆ ನೀಡಿದರು.

ಕೇಸರಿಮಯವಾಗಿ ಶೃಂಗಾರಗೊಂಡಿದ್ದ ಆವತಿ ಹೋಬಳಿಯ ಮುಖ್ಯ ಕೇಂದ್ರ ಗುರೂಜಿಯವರ ಆಶೀರ್ವಚನಕ್ಕೆ ಸಾವಿರ ಸಂಖ್ಯೆಯಲ್ಲಿ ಕಾದು ಕುಳಿತಿದ್ದರು.
ಸಭೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ವಿಕ್ರಮ ವಾರಪತ್ರಿಕೆಯ ಸಂಪಾದಕರಾದ ನಾಗರಾಜ್ ರವರು ಹಿಂದು ಧರ್ಮದ ಶ್ರೇಷ್ಠತೆ ಮತ್ತು ಪರಂಪರೆಯ ಬಗ್ಗೆ ಮಾತನಾಡಿದರು.
ರಾಜ್ಯಶಾಸ್ತ್ರ ಉಪನ್ಯಾಸಕರಾದ ಸವಿತಾ ರವರು ಕುಟುಂಬ ಮತ್ತು ಸ್ತ್ರೀ ಕುರಿತಂತೆ ಉಪನ್ಯಾಸ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಬೈಗೂರು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಜಗದೀಶ್ ಕೆಂಚಯ್ಯ ವಹಿಸಿದ್ದರು. ವೇದಿಕೆಯಲ್ಲಿ ದೇವರಾಜ್ ಶೆಟ್ಟಿ, ಗೀತಾ ದಯಾನಂದ ಆಚಾರ್ಯ ಇದ್ದರು.



