ಮೂಡಿಗೆರೆ ತಾಲ್ಲೂಕು ಬಣಕಲ್ ಸಮೀಪದ ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೆ.ಎಂ.ಇಂಪಾ ಸವೀನ್ ಅವರು ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಐಎಎಸ್ ಅಧಿಕಾರಿ ಅನಿತಾ ಕೌಲ್ ಅವರ ನೆನಪಿನಾರ್ಥ ನೀಡುವ ಅತ್ಯುತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಯನ್ನು ಪ್ರತೀ ಜಿಲ್ಲೆಯ ಮೂರು ಶಿಕ್ಷಕರಿಗೆ ಅವರ ಸೇವಾನುಸಾರ ನೀಡುತ್ತದೆ.
ಈ ಬಾರಿ ಮೂಡಿಗೆರೆ ತಾಲ್ಲೂಕಿನ ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೆ.ಎಂ.ಇಂಪಾ ಸವೀನ್ ಅವರಿಗೆ ಪ್ರಶಸ್ತಿಯ ಗರಿ ಒದಗಿ ಬಂದಿದೆ.
ಬಾನಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 19 ವರ್ಷಗಳಿಂದ ಸೇವೆ ನೀಡುತ್ತಿದ್ದಾರೆ. ಗ್ರಾಮದಲ್ಲಿ ಉತ್ತಮ ಶಿಕ್ಷಕಿಯಾಗಿ ಜನರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ. ಬಾನಹಳ್ಳಿ ಶಾಲೆಯನ್ನು ಒಂದು ಮಾದರಿ ಶಾಲೆಯಾಗಿ ರೂಪಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕೂಡ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಸುತ್ತಮುತ್ತಲ ಪ್ರದೇಶಗಳ ಜನರು ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಹೆಚ್ಚಿನ ಆಸಕ್ತಿ ವಹಿಸುವಂತೆ ಮಾಡಿದ್ದಾರೆ.

ಇಂಪಾ ಸವಿನ್ ಅವರ ಕಾರ್ಯವನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫೆಬ್ರುವರಿ 22ರಂದು ಬೆಂಗಳೂರಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಿಕ್ಷಕಿ ಜೆ.ಎಂ.ಇಂಪಾ ಈ ಪ್ರಶಸ್ತಿ ಪಡೆಯಲಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಮುಗಳಿಕಟ್ಟೆ ಲೋಕೇಶ್ ತಿಳಿಸಿದ್ದಾರೆ.
ಪ್ರಶಸ್ತಿಯ ನಿರೀಕ್ಷೆಯೇ ಇರಲಿಲ್ಲ.ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಎಲ್ಲರೂ ಸಹಜವಾಗಿ ಅರ್ಜಿ ಸಲ್ಲಿಸುತ್ತಾರೆ.ಅಷ್ಟು ಶಿಕ್ಷಕರ ಮಧ್ಯೆ ನನಗೆ ಪ್ರಶಸ್ತಿ ಬಂದಿದೆ ಎಂದು ಸ್ನೇಹಿತರು ಪೋನ್ ಮಾಡಿ ಕೇಳಿದಾಗ ನನಗೆ ಅಚ್ಚರಿಯಾಯಿತು. ಪ್ರಶಸ್ತಿ ಪಡೆಯುವುದರಿಂದ ಶೈಕ್ಷಣಿಕ ಮಟ್ಟದಲ್ಲಿ ಮತ್ತಷ್ಟು ಜವಾಬ್ದಾರಿಗಳು ಹೆಚ್ಚಾಗುತ್ತವೆ.ಪ್ರಶಸ್ತಿ ನಮ್ಮ ಸಾಧನೆಗೆ ದಾರಿಯಾಗುತ್ತದೆ.ಜ್ಞಾನ ವಿಜ್ಞಾನ ಸಮಿತಿಯ ಆಯ್ಕೆಗೆ ಅಭಿನಂದಿಸುತ್ತೇನೆ.
–ಶಿಕ್ಷಕಿ ಜೆ.ಎಂ.ಇಂಪಾ ಸವೀನ್,



