ಮೂಡಿಗೆರೆಯ ಹಿರಿಯ ವಕೀಲ ಯು.ಎಂ. ಅಶೋಕ್ (61 ವರ್ಷ) ನಿಧನರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮುಂಜಾನೆ ಚಿಕ್ಕಮಗಳೂರು ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂಡಿಗೆರೆ ತಾಲ್ಲೂಕು ಊರುಬಗೆ ಗ್ರಾಮದ ಅಶೋಕ್ ಅವರು ಹಲವು ವರ್ಷಗಳಿಂದ ವಕೀಲಿ ವೃತ್ತಿ ಮಾಡುತ್ತಿದ್ದರು. ಮೂಡಿಗೆರೆ ವಕೀಲರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಕಾಫಿ ಬೆಳೆಗಾರರು ಆಗಿದ್ದ ಅಶೋಕ್ ಅವರು ಊರುಬಗೆ ಸಿರಿಮನೆ ಹೋಂ ಸ್ಟೇ ಮಾಲೀಕರಾಗಿದ್ದರು. ಸಹೃದಯಿ ವ್ಯಕ್ತಿತ್ವ ಹೊಂದಿದ್ದರು. ಅನೇಕ ಬಡವರಿಗೆ ಉಚಿತವಾಗಿ ಕಾನೂನು ಸೇವೆ ನೀಡುತ್ತಿದ್ದರು. ಉತ್ತಮ ವಾಗ್ಮಿಯಾಗಿದ್ದರು. ಕಾನೂನು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಉಪನ್ಯಾಸಗಳನ್ನು ನೀಡಿದ್ದರು.
ಮೃತರು ತಾಯಿ, ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯೂ ಇಂದು (ಮಂಗಳವಾರ) ಸಂಜೆ 4 ಗಂಟೆಗೆ ಊರುಬಗೆ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ



