ಕೊಡಗಿನಲ್ಲಿ ಕಾಫಿ ಎಸ್ಟೇಟ್ ಮಾಲೀಕರೋರ್ವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಗುರುವಾರ ಈ ದುರ್ಘಟನೆ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಈ ಘಟನೆ ನಡೆದಿದ್ದು, ತಮ್ಮ ತೋಟಕ್ಕೆ ತೆರಳಿದ್ದ ಕಾಫಿ ಎಸ್ಟೇಟ್ ಮಾಲೀಕ ಗಣಪತಿ (49 ವರ್ಷ) ಎಂಬುವವರ ಮೇಲೆ ಕಾಡಾನೆ ದಾಳಿ ಮಾಡಿ ಸಾಯಿಸಿದೆ. ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಕಾಫಿ ಬೆಳೆಗಾರನ ಮೇಲೆ ಆನೆ ದಾಳಿ ಮಾಡಿದೆ. ಆನೆ ದಾಳಿಗೊಳಗಾದ ರೈತ ಗಣಪತಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಒಂದೇ ವಾರದಲ್ಲಿ ಕೊಡಗು ಜಿಲ್ಲೆಯಲ್ಲಿ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ವಾರದ ಹಿಂದೆ ಪಿಯುಸಿ ವಿದ್ಯಾರ್ಥಿನಿಯೋರ್ವಳು ಕಾಡಾನೆ ದಾಳಿಗೆ ಬಲಿಯಾಗಿದ್ದರು. ನಾಲ್ಕೈದು ದಿನಗಳ ಹಿಂದೆ ಕುಶಾಲನಗರ ಸಮೀಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಈ ನಡುವೆ ಮತ್ತೊಂದು ಜೀವ ಆನೆ ದಾಳಿಗೆ ಬಲಿಯಾಗಿದೆ.
ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆಗಳು ಕಾಣಿಸಿಕೊಂಡ ಜನರ ಮೇಲೆ ದಾಳಿ ಮಾಡುತ್ತಿವೆ. ಈ ಘಟನೆಗಳಿಂದ ರೈತರ ಸಹನೆಯ ಕಟ್ಟೆಯೊಡೆದಿದ್ದು, ಅರಣ್ಯ ಇಲಾಖೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳಾದ ಸಿಸಿಎಫ್ ಸೋನಲ್ ವೃಷ್ಣಿ, ಡಿಸಿಎಫ್ ಅಭಿಷೇಕ್ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.



