ಫೆಡರೇಷನ್ ಆಫ್ ಮೋಟಾರ್ ಸ್ಪೋಟ್ರ್ಸ್ ಕ್ಲಬ್ಸ್ ಆಫ್ ಇಂಡಿಯಾ ವತಿಯಿಂದ ಆಟೋ ಕ್ರಾಸ್ ಚಾಂಪಿಯನ್ ಶಿಪ್ ಅಂತಿಮ ಸುತ್ತು ಮಾರ್ಚ್ 29 ರಂದು ಚಿಕ್ಕಮಗಳೂರಿನ ಕುರುವಂಗಿ ಗ್ರಾಮದ ಸಗನೀಪುರದಲ್ಲಿ ನಡೆಯಲಿದೆ ಎಂದು ಚಿಕ್ಕಮಗಳೂರು ದಿ ಮೋಟಾರ್ಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಪೈ ತಿಳಿಸಿದರು.
ಅವರು ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾರ್ಚ್ 29 ರಂದು ಬೆಳಿಗ್ಗೆ 8-30 ರಿಂದ ಮಧ್ಯಾಹ್ನ 2-30 ರವರೆಗೆ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ದಕ್ಷಿಣ, ಉತ್ತರ, ಪೂರ್ವ ಮತ್ತು ಪಶ್ಚಿಮ ವಲಯಗಳಿಂದ ಅರ್ಹತೆ ಪಡೆದ ದೇಶದ ಪ್ರಮುಖ ಆಟೋಕ್ರಾಸ್ ಚಾಲಕರು ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಸಲಿದ್ದು, ಸುಮಾರು 30 ಸ್ಪರ್ಧಿಗಳು ವಿವಿಧ ವರ್ಗಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪ್ರಮುಖ ಸ್ಪರ್ಧಿಗಳಲ್ಲಿ ದೆಹಲಿಯ ಫಿಲಿಯೋಸ್ ಮತಾಯಿ ಮತ್ತು ಅರ್ನವ್ ಪ್ರತಾಪ್ ಸಿಂಗ್, ಬೆಂಗಳೂರಿನ ಚೇತನ್ ಶಿವರಾಮ್, ಮೈಸೂರಿನ ರಕ್ಷಿತ್ ಐಯರ್ ಮತ್ತು ಸಯ್ಯದ್ ಸಲ್ಮಾನ್, ಗೋವಾದ ವೈಭವ್ ಮರಾಠೆ, ನಾಗಾಲ್ಯಾಂಡಿನ ಬಾಬಿತ್ ಲಿಂಗ್ದೋಹ್, ಮುಂಬೈನ ಕುಶಾಲ್ ಚೌದರಿ, ತ್ರಿಶೂರ್‍ನ ಅಲೆಕ್ಸ್ ಕುರುವಿಳ, ಚಿಕ್ಕಮಗಳೂರಿನ ಐಮನ್ ಅಹ್ಮದ್, ಗೌತಮ್ ಸಿ.ಪಿ ಮತ್ತು ಅಸಾದ್ ಪಾಶಾ, ಮಹಿಳಾ ವಿಭಾಗದಲ್ಲಿ ತರುಷಿ ವಿಕ್ರಮ್, ಶಿವಾನಿ ಪೃಥ್ವಿ, ಶ್ರೀಜಿತಾ ಶೋಮ್, ಶಮೀನಾ ಸಿ.ಪಿ, ಪ್ರಾಚಿ ಗಾಯಕ್ವಾಡ್ ಮತ್ತು ಪಲ್ಲವಿ ಯಾದವ್ ಪ್ರಮುಖರಾಗಿದ್ದಾರೆ ಎಂದರು.
ಚಾಂಪಿಯನ್ ಶಿಪ್‍ನಲ್ಲಿ ಒಟ್ಟು 8 ವರ್ಗಗಳು ಇದ್ದು, ಸುಮಾರು 130 ಸ್ಪರ್ಧಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ. ಈ ಆಟೋಕ್ರಾಸ್ ಸ್ಪರ್ಧೆ ಟ್ವಿನ್ ಟ್ರ್ಯಾಕ್ ಮಾದರಿಯಲ್ಲಿ ನಡೆಯಲಿದ್ದು, ಎರಡು ಕಾರುಗಳು ಒಂದೇ ಸಮಯದಲ್ಲಿ ಪ್ರಾರಂಭಿಸಿ 2.5 ಕಿ.ಮೀ ಉದ್ದದ ಗ್ರಾವೆಲ್ ಟ್ರ್ಯಾಕ್‍ನಲ್ಲಿ ಸ್ಪರ್ಧಿಸಲಿವೆ. ಟ್ರ್ಯಾಕ್‍ನಲ್ಲಿ ಕ್ರಾಸ್ ಓವರ್ ಅಂಡರ್‍ಬ್ರಿಡ್ಜ್ ವ್ಯವಸ್ಥೆ ಇರುವುದರಿಂದ ಸ್ಪರ್ಧೆ ಹೆಚ್ಚು ರೋಚಕವಾಗಿರುತ್ತದೆ ಎಂದು ತಿಳಿಸಿದರು.
ಐಎನ್‍ಎಸಿ ಚಾಂಪಿಯನ್ ವಿಜೇತರಿಗೆ ಪ್ರಥಮ 15 ಸಾವಿರ ಹಾಗೂ ಟ್ರೋಫಿ, ದ್ವಿತೀಯ 10 ಸಾವಿರ ಹಾಗೂ ಟ್ರೋಫಿ, ತೃತೀಯ 7.5 ಸಾವಿರ ಹಾಗೂ ಟ್ರೋಫಿ ನೀಡಲಾಗುವುದು. ಗ್ರಾವೆಲ್ ಗ್ರಿಂಡ್‍ನಲ್ಲಿ ವಿಜೇತರಿಗೆ ಪ್ರಥಮ 5 ಸಾವಿರ ಹಾಗೂ ಟ್ರೋಫಿ, ದ್ವಿತೀಯ 3 ಸಾವಿರ ಹಾಗೂ ಟ್ರೋಫಿ, ತೃತೀಯ 2 ಸಾವಿರ ಹಾಗೂ ಟ್ರೋಫಿ ನೀಡಲಾಗುವುದು ಎಂದು ಹೇಳಿದರು.
ಚಿಕ್ಕಮಗಳೂರು ಗ್ರಾವೆಲ್ ಫೆಸ್ಟ್ ದೇಶಾದ್ಯಂತ ಮೋಟಾರ್ ಸ್ಪೋಟ್ರ್ಸ್ ಅಭಿಮಾನಿಗಳು, ತಂಡಗಳು ಮತ್ತು ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದ್ದು, ಈ ಪ್ರದೇಶದಲ್ಲಿ ಪ್ರಮುಖ ಮೋಟಾರ್ ಸ್ಪೋಟ್ರ್ಸ್ ಕಾರ್ಯಕ್ರಮವಾಗಿದ್ದು, 2025ರ ಐಎನ್‍ಎಸಿ ಆಟೋಕ್ರಾಸ್ ಚಾಂಪಿಯನ್ ಶಿಪ್ ಭವ್ಯವಾಗಿ ಅಂತ್ಯವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ದಿ ಮೋಟಾರ್ಸ್ ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಅಭಿಜಿತ್ ಪೈ, ಖಜಾಂಚಿ ದಿಲೀಪ್ ಜೈನ್ ಉಪಸ್ಥಿತರಿದ್ದರು.



