ಇತ್ತೀಚೆಗೆ ಹೊರಗುತ್ತಿಗೆ ನೌಕರರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅವರನ್ನು ಖಾಯಂ ಮಾಡುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದು ಅಗತ್ಯ ಎಂದು ವಕೀಲ ಪರಮೇಶ್ ತಿಳಿಸಿದರು.
ಅವರು ಚಿಕ್ಕಮಗಳೂರು ನಗರದ ದಂಟರಮಕ್ಕಿಯಲ್ಲಿ ಆರಂಭಿಸಲಾಗಿರುವ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಸಂವಿಧಾನ ಬದ್ಧವಾಗಿ ಆರ್ಟಿಕಲ್ 15ರ ಪ್ರಕಾರ ಎಲ್ಲಾ ಜಾತಿ, ಲಿಂಗ ತಾರತಮ್ಯ ಮಾಡದೆ ಉದ್ಯೋಗದ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದೊಂದಿಗೆ ಎಲ್ಲಾ ಇಲಾಖೆಗಳಲ್ಲಿ ನೇಮಕಾತಿ ನಡೆಯುತ್ತಿದೆ ಎಂದರು.
ಒಂದೇ ವರ್ಗದ ಜನರು ಇರಬಾರದೆಂಬ ದೃಷ್ಟಿಯಿಂದ ವರ್ಗೀಕರಣ ಮಾಡಿ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿದೆ. ಆದರೆ, ಸರ್ಕಾರದಿಂದ ನೇರ ನೇಮಕಾತಿ ಆಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಉದ್ಯೋಗ ನೀಡುತ್ತಿರುವುದರಿಂದ ನೌಕರರ ಸ್ಥಿತಿ ತ್ರಿಶಂಕು ಸ್ಥಿತಿಯಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸೇವೆ ಸಲ್ಲಿಸುವವರಿಗೆ ಕಾರ್ಮಿಕ ಕಾಯಿದೆ ಅನ್ವಯವಾಗಲಿದ್ದು, ಸರ್ಕಾರಿ ಹೊರಗುತ್ತಿಗೆ ನೌಕರರಿಗೆ ವೇತನ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ನೌಕರರನ್ನು ಮೊದಲು ಭರ್ತಿಮಾಡಿಕೊಂಡು ಉಳಿದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೆ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಶಾಸಕರು, ಸಚಿವರು ಸಂಸದರ ಗೌರವಧನ ಹೆಚ್ಚಳಕ್ಕೆ ಯಾವುದೇ ಮಾನದಂಡ ಇಲ್ಲದೆ ಆಗುತ್ತದೆ. ಆದರೆ, ಹೊರಗುತ್ತಿಗೆ ನೌಕರರಿಗೆ ವೇತನ ತಾರತಮ್ಯ ನಡೆಯುತ್ತಿರುವುದನ್ನು ಖಂಡಿಸಿದರು.
ಸರ್ಕಾರಿ ಹೊರಗುತ್ತಿಗೆ ನೌಕರರರಿಗೆ ಆಧುನಿಕ ಜೀತಪದ್ಧತಿಯಂತಾಗಿದೆ. ಖಾಸಗಿ ಉದ್ಯೋಗಿಗಳಿಗೆ ತೊಂದರೆಯಾದರೆ ಕಾರ್ಮಿಕ ಕಾಯಿದೆ ಅಡಿ ಹಕ್ಕು ಪಡೆಯಬಹುದಾಗಿದ್ದು, ಹೊರಗುತ್ತಿಗೆ ನೌಕರರಿಗೆ ನೇಮಕ ಮಾಡಿಕೊಂಡಿರುವ ಏಜನ್ಸಿಯವರ ಬಳಿ ಹೋರಾಟ ನಡೆಸುವ ಅನಿವಾರ್ಯತೆ ಇದ್ದು, ಈ ಕುರಿತು ಸರ್ಕಾರಕ್ಕೆ ಕೇಳಿದರೆ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ದೂರಿದರು.
ಜಿಲ್ಲಾಧ್ಯಕ್ಷ ಮಂಜು ಮಾತನಾಡಿ, ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಸರ್ಕಾರ ನೇರ ನೇಮಕಾತಿ ಮಾಡಬೇಕು, ಹೊರಗುತ್ತಿಗೆ ನೌಕರರ ಸಂಪರ್ಕ ಮತ್ತು ಬೇಡಿಕೆಗಳಿಗೆ ಸ್ಪಂದಿಸಬೇಕೆಂಬ ಉದ್ದೇಶದೊಂದಿಗೆ ಕಚೇರಿಯನ್ನು ಉದ್ಘಾಟಿಸಲಾಗಿದ್ದು, ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರ್ಕಾರ ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಉನ್ನತಿ ಎಂಟರ್‍ಪ್ರೈಸಸ್ ಮಾಲಿಕ ಮೋಹನ್‍ಕುಮಾರ್ ಮಾತನಾಡಿ, ಪಿಎಫ್, ಇಎಸ್‍ಐ, ಕನಿಷ್ಠ ವೇತನ ಮುಂತಾದ ಹೊರಗುತ್ತಿಗೆ ನೌಕರರ ಹಲವಾರು ಬೇಡಿಕೆಗಳಿದ್ದು, ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದ ಅವರು, ಇದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಇಎಸ್‍ಐ ಕಾರ್ಡ್ ಹೊಂದಿರುವ 9500 ಜನ ಇದ್ದು, ಕೂಡಲೇ ಇಎಸ್‍ಐ ಆಸ್ಪತ್ರೆಯನ್ನು ಮಂಜೂರು ಮಾಡಬೇಕು. ಈ ಸಂಬಂಧ ರಾಜ್ಯ ಮತ್ತು ಕೇಂದ್ರಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಗದುರಹಿತ ಸೇವೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಬರಬೇಕು, ಇಎಸ್‍ಐ ಸೌಲಭ್ಯ ಕಾಫಿತೋಟ ಕಾರ್ಮಿಕರಿಗೂ ಲಭ್ಯವಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮಣಿಕುಮಾರ್, ಉಪಾಧ್ಯಕ್ಷ ಗಿರೀಶ್, ಜಿಲ್ಲಾ ಕಾರ್ಯದರ್ಶಿ ಪ್ರದೀಪ್, ನಿರ್ದೇಶಕರಾದ ಮಂಜು, ರಾಕೇಶ್, ಶೈಲಾ ಉಪಸ್ಥಿತರಿದ್ದರು.



