suddi1_copy_1252x518

 

 

ರಾಜ್ಯ ಸರ್ಕಾರ, ಬಿಡಿಎ, ಸಿಡಿಎ, ಮೂಡ, ಗೃಹ ಮಂಡಳಿಗಳು ನೀಡಿರುವ ನಿವೇಶನಗಳಿಗಿಂತ ಹೆಚ್ಚಿನ ನಿವೇಶನಗಳನ್ನು ಅದೂ ಕಡಿಮೆ ಬೆಲೆಗೆ ಗೃಹ ನಿರ್ಮಾಣ ಸಹಕಾರ ಸಂಘಗಳು ರಾಜ್ಯಾದ್ಯಂತ ಸಾರ್ವಜನಿಕರಿಗೆ ನೀಡಿವೆ ಎಂದು ರಾಜ್ಯ ಸಹಕಾರಿ ವಸತಿ ಮಹಾಮಂಡಲದ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ಹೇಳಿದರು.

ನಗರ ಗೃಹ ನಿರ್ಮಾಣ ಸಹಕಾರ ಸಂಘ ಶತಮಾನೋತ್ಸವದ ನೆನಪಿಗಾಗಿ ನಿರ್ಮಿಸಲಿರುವ ನೂತನ ಕಟ್ಟಡಕ್ಕೆ ಚಿಕ್ಕಮಗಳೂರು ನಗರದ ಡಿಸಿಸಿ ಬ್ಯಾಂಕ್ ಭವನದಲ್ಲಿ ಸೋಮವಾರ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಕ್ಕಿಂತ ಹೆಚ್ಚಿನ ನಿವೇಶನಗಳನ್ನು ಸಾರ್ವಜನಿಕರಿಗೆ ನೀಡಿರುವ ಬಹಳಷ್ಟು ಗೃಹ ನಿರ್ಮಾಣ ಸಹಕಾರ ಸಂಘಗಳು ರಾಜ್ಯದಲ್ಲಿ ಇನ್ನೂ ಜೀವಂತವಾಗಿವೆ, ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲೂ ಅವು ಕಾರ್ಯನಿರ್ವಹಿಸುತ್ತಿವೆ, ಸಹಕಾರ ಸಂಘಗಳ ಅಭಿವೃದ್ಧಿ ಇತ್ತೀಚಿನ ದಿನಗಳಲ್ಲಿ ಕುಂಠಿತವಾಗುತ್ತಿದೆ ಎಂದರು. ಸಹಕಾರ ಸಂಘಗಳು ಉಳಿದು ಬೆಳೆಯುವುದು ಕಷ್ಟವಾಗಿರುವ ಇಂದಿನ ಸನ್ನಿವೇಶದಲ್ಲಿ ಚಿಕ್ಕಮಗಳೂರಿನ ಗೃಹ ನಿರ್ಮಾಣ ಸಹಕಾರ ಸಂಘ 100 ವರ್ಷಗಳನ್ನು ಕಾಣುತ್ತಿರುವುದು ಶ್ಲಾಘನೀಯ ಎಂದರು.

ಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಅವರ ಕೊಡುಗೆ ಅಪಾರವಾಗಿದೆ ಎಂದ ಅವರು ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಮತ್ತು ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಂ. ನಾರಾಯಣ ಅವರ ಕಾರ್ಯ ಚಟುವಟಿಕೆಗಳನ್ನು ಪ್ರಶಂಶಿಸಿದರು.

ಸಹಕಾರ ಸಂಘಗಳ ಕಾಯ್ದೆಗಳಿಗೆ ಸರ್ಕಾರ ತಿದ್ದುಪಡಿ ವಿಧೇಯಕಗಳನ್ನು ತರಲು ಮುಂದಾಗಿರುವ ಕ್ರಮ ಸರಿಯಲ್ಲ, ಸರ್ಕಾರಗಳು ಸಹಕಾರಿ ಕ್ಷೇತ್ರ ಬೆಳೆಯಲು ವಿಧೇಯಕಗಳನ್ನು ತರಬೇಕೆ ಹೊರತು ಅದನ್ನು ಹಾಳು ಮಾಡಲು ತರಬಾರದು ಎಂದ ಅವರು ಈ ನಿಟ್ಟಿನಲ್ಲಿ ಸರ್ಕಾರ ಮಂಡಿಸಲು ಮುಂದಾಗಿರುವ ತಿದ್ದುಪಡಿ ವಿಧೇಯಕವನ್ನು ತಾವು ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ ನಗರದಲ್ಲಿ ಸಣ್ಣದಾಗಿ ಆರಂಭಗೊಂಡ ಗೃಹ ನಿರ್ಮಾಣ ಸಹಕಾರ ಸಂಘ ನೂರು ವರ್ಷಗಳ ಅವಧಿಯಲ್ಲಿ ಬಹಳಷ್ಟು ನಿವೇಶನ, ಮನೆ, ಸಾಲ ನೀಡುವ ಮೂಲಕ ಸಾವಿರಾರು ಜನರಿಗೆ ಬದುಕನ್ನು ಕಟ್ಟಿಕೊಟ್ಟಿದೆ ಎಂದರು.

ಶತಮಾನೋತ್ಸವ ಕಾಣುತ್ತಿರುವ ಹಿನ್ನೆಲೆಯಲ್ಲಿ ಗೃಹ ನಿರ್ಮಾಣ ಸಹಕಾರ ಸಂಘವನ್ನು ಅದರ ಪದಾಧಿಕಾರಿಗಳನ್ನು ಅಭಿನಂದಿಸಿದ ಅವರು ಕಟ್ಟಡ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಚಿಕ್ಕಮಗಳೂರಿನಲ್ಲಿ ಸಹಕಾರ ಸಂಘಗಳನ್ನು ಹುಟ್ಟು ಹಾಕಿದವರು ಮಾಜಿ ಶಾಸಕ ಎಸ್.ಎಲ್. ಧರ್ಮಗೌಡರು ಜಿಲ್ಲೆಯಲ್ಲಿ ಅವರು ಅನೇಕ ಸಹಕಾರ ಸಂಘಗಳನ್ನು ಬೆಳೆಸಲು ಶ್ರಮಿಸಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲ ರೀತಿಯಲ್ಲೂ ಸಹಕರಿಸುವ ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ ಸಹಕಾರ ಸಂಘಗಳ ಮೂಲಕ ಇಂದು ಕೃಷಿಕರು ಮತ್ತು ಕೃಷಿ ಕ್ಷೇತ್ರ ಉಳಿಯಬೇಕಾಗಿದೆ, ಸಹಕಾರ ಸಂಘಗಳ ಮೂಲಕ ಕೇವಲ ಶೇ 27ರಷ್ಟು ಕೃಷಿಕರಿಗೆ ಮಾತ್ರ ಸಾಲ ನೀಡಲು ಸಾಧ್ಯವಾಗಿದೆ ಉಳಿದ ಶೇ 73 ರಷ್ಟು ಕೃಷಿಕರಿಗೆ ಸಹಾಯ ಹಸ್ತ ಚಾಚಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ಕೋಟಿಗಟ್ಟಲೆ ಬೆಲೆ ಬಾಳುವ ಕೃಷಿ ಭೂಮಿಗೆ ಸಾಲ ನೀಡಲು ಬ್ಯಾಂಕುಗಳು ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಕೃಷಿ ಕ್ಷೇತ್ರಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಮಾಡದಿದ್ದರೆ ಸಹಕಾರ ಸಂಘಗಳು ಮತ್ತು ಸಹಕಾರಿ ಕ್ಷೇತ್ರ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಮಾತನಾಡಿ ಗೃಹ ನಿರ್ಮಾಣ ಸಹಕಾರ ಸಂಘದ ಅಭಿವೃದ್ಧಿಗೆ ಅದರ ಕಾರ್ಯದರ್ಶಿಯಾಗಿ ಹಲವಾರು ವರ್ಷ ಕಾರ್ಯನಿರ್ವಹಿಸಿದ ಹೆಚ್.ಎಲ್. ಅನಂತರಾಮು ಅವರ ಕೊಡುಗೆ ಅಪಾರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಎಂ. ನಾರಾಯಣ ಗೃಹ ನಿರ್ಮಾಣ ಸಹಕಾರ ಸಂಘ ಬೆಳೆಯಲು ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಶತಮಾನೋತ್ಸವದ ನೆನಪಿಗಾಗಿ ನಗರದ ಬೈಪಾಸ್ ರಸ್ತೆಯಲ್ಲಿ ಆದಷ್ಟು ಶೀಘ್ರವಾಗಿ ನೂತನ ಕಟ್ಟಡವನ್ನು ನಿರ್ಮಿಸಲಾಗುವುದು, ಸಂಘದ ಹಣವನ್ನು ಬಳಸದೇ ದೇಣಿಗೆ ಸಂಗ್ರಹಿಸಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗುವುದು ಎಂದ ಅವರು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಗೃಹ ನಿರ್ಮಾಣ ಸಹಕಾರ ಸಂಘದ ಅಭಿವೃದ್ಧಿಗೆ ದುಡಿದವರು ವೇದಿಕೆಯಲ್ಲಿದ್ದ ಗಣ್ಯರು ಮತ್ತು ರಾಜ್ಯ ವಸತಿ ಮಹಾಮಂಡಲದ ಪದಾಧಿಕಾರಿಗಳು, ನಿರ್ದೇಶಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ನಗರ ಸಭೆ ಅಧ್ಯಕ್ಷೆ ಶೀಲಾದಿನೇಶ್, ಸದಸ್ಯೆ ರೂಪಾಕುಮಾರ್, ಸಿಡಿಎ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಮಲೆನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್, ಕೇಶವಮೂರ್ತಿ, ಉದ್ಯಮಿ ಡಾ ಅಪ್ಸರ್ ಹಿಂದೂಸ್ತಾನಿ, ಸಂಘದ ನಿರ್ದೇಶಕ ಎಲ್.ಕೆ. ವೇಣುಗೋಪಾಲ್, ಸುಮಾ ಪ್ರಸಾದ್. ಕನ್ನಡಸೇನೆ ಅಧ್ಯಕ್ಷ ಪಿ.ಸಿ. ರಾಜೇಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ