ಚಿಕ್ಕಮಗಳೂರು ಜಿಲ್ಲೆಯ 137 ಹಳ್ಳಿಗಳನ್ನು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಎಂದು ಹೊರಡಿಸಿರುವ ಕರಡು ಪ್ರತಿಯನ್ನು ಕೂಡಲೇ ಕೇಂದ್ರ ಸರ್ಕಾರ ಹಿಂಪಡೆಯಬೇಕು. ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ಪ್ರತಿ ಹಳ್ಳಿಯ ಎಲ್ಲಾ ಜನರು ಆಕ್ಷೇಪಣೆ ಸಲ್ಲಿಸುವಂತೆ ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಹೇಳಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಲೆನಾಡಿನ ಜನರು ನೂರಾರು ವರ್ಷಗಳಿಂದ ನಾಡು ಕಟ್ಟಿ ಬೆಳೆಸಿದ್ದಾರೆ. ಪ್ರಾಣಿಗಳು, ಮನುಷ್ಯರು, ನೀರು, ಭೂಮಿ ಎಲ್ಲಾ ಜೀವ ಸಂಕುಲಗಳ ಜೊತೆಗೆ ಜೀವನ ಮಾಡುತ್ತಿದ್ದಾರೆ. ಏಕಾಏಕಿ ಅವರನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕರಡನ್ನು ಹೊರಡಿಸಿದರೆ ಅಲ್ಲಿ ಜೀವನ ಮಾಡುವ ಜನರ ಜೀವನ ಕಷ್ಟಕರವಾಗುತ್ತದೆ ಎಂದು ತಿಳಿಸಿದರು.
ಈ ಪರಿಸರ ಸೂಕ್ಷ್ಮ ಪ್ರದೇಶ ಮಾಡುವುದರಿಂದ ಎಷ್ಟು ಅನುಕೂಲವಾಗುತ್ತೆ ಮತ್ತು ಅನಾನುಕೂಲವಾಗುತ್ತದೆ ಎಂದು ಕರಡಿನಲ್ಲಿ ಸ್ಪಷ್ಟತೆ ಇಲ್ಲ. ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಹಳ್ಳಿಯ ಜನರು ಯಾರು ಧೃತಿಗೆಡಬೇಡಿ ನಾವು ನಿಮ್ಮ ಜೊತೆ ಇದ್ದೇವೆ. ಎಲ್ಲಾ ಜನಪರ ಚಳುವಳಿಯ ನಾಯಕರು ನಿಮ್ಮ ಜೊತೆ ಹೋರಾಟದ ಹೆಜ್ಜೆಹಾಕುತ್ತಾರೆ ಎಂದರು.
ಒಂದು ವಾರದ ಒಳಗೆ ರೈತ ಸಂಘ, ಕಮುನಿಷ್ಟ್ ಪಾರ್ಟಿ, ಬಿಎಸ್‍ಪಿ, ಡಿಎಸ್‍ಎಸ್, ಕಾಂಗ್ರೆಸ್, ಜೆಡಿಎಸ್ ಎಲ್ಲಾರನ್ನು ಒಳಗೊಂಡು ರೈತ ಸಂಘದ ನೇತೃತ್ವದಲ್ಲಿ ಒಂದು ಸಭೆಯನ್ನು ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ಜನರು ಎಚ್ಚೆತ್ತುಕೊಳ್ಳಬೇಕು ನಿಮ್ಮ ಮನೆ ಬಾಗಿಲಿಗೆ ಕೊಡಲಿ ಪೆಟ್ಟು ಬಂದಿದೆ. ಕೇಂದ್ರ ಸರ್ಕಾರ ಮಾಡಿರುವ ನೀತಿಯ ಪ್ರತಿಫಲ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಮಲೆನಾಡಿನ 137 ಹಳ್ಳಿಯ ಜನರು ಹೋರಾಟಕ್ಕೆ ಸಜ್ಜಾಗಬೇಕು. ಹೋರಾಟ ಮಾಡದೇ ಇದ್ದರೆ ನೀವು ಯಾರು ಉಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೋರಾಟಕ್ಕೆ ಕರೆಕೊಟ್ಟರು.
ಜನ ವಿರೋಧಿ ಕಸ್ತೂರಿ ರಂಗನ್ ವರದಿನ್ನು ತಿರಸ್ಕಾರ ಮಾಡಬೇಕು. ನಮ್ಮ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು, ನಮ್ಮ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಎಲ್ಲರೂ ಒಟ್ಟಾಗಿ ಧ್ವನಿ ಎತ್ತಬೇಕು. ಇದು ಜನರ ಸಮಸ್ಯೆ ಇದರ ಬಗ್ಗೆ ನೀವು ಮಾತನಾಡಬೇಕು ಎಂದು ಒತ್ತಾಯಿಸಿದರು.
ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಪ್ರತಿ ಹಳ್ಳಿಯ ಪ್ರತಿ ಜನರು ಆಕ್ಷೇಪಣೆ ಸಲ್ಲಿಸಬೇಕು. ಆಕ್ಷೇಪಣೆ ಸಲ್ಲಿಸಿ ಚಳುವಳಿಯಲ್ಲಿ ಭಾಗವಹಿಸ ಬೇಕು ಎಂದು ಕರೆ ಕೊಟ್ಟರು.
ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಮಾತನಾಡಿ, ವರದಿ ಅಂಗೀಕಾರವಾದರೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಿಲ್ಲ, ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡುವ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸುತ್ತ?ಮುತ್ತ ಪ್ರದೇಶ, ನಗರಸಭೆ ಎಲ್ಲರು ಈ ಕರಡನ್ನು ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಹಾಗೂ ಸುಪ್ರೀಂ ಕೋರ್ಟ್‍ಗೆ ಒತ್ತಾಯಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮೇಶ್, ತಾಲ್ಲೂಕು ಕಾರ್ಯದರ್ಶಿ ಸಚಿನ್, ಮುಖಂಡರಾದ ಶಾಂತಕುಮಾರ್, ಉಪ್ಪಳ್ಳಿ ಭರತ್ ಉಪಸ್ಥಿತರಿದ್ದರು.


