ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೋಮವಾರ ಸಂಜೆ ವಿಸ್ತರಣೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ 20 ನೂತನ ಸಚಿವರ ಹೆಸರನ್ನು ಪ್ರಕಟಿಸಿತ್ತಾದರೂ ಕೊನೆ ಕ್ಷಣದಲ್ಲಿ 19 ಮಂದಿ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸೋಮವಾರ ಸಂಜೆ 5 ಗಂಟೆಗೆ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು 19 ಸಚಿವರಿಗೆ ಮಾತ್ರ ಪ್ರತಿಜ್ಞಾವಿಧಿ ಬೋಧಿಸಿದರು.
ಮೊದಲಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್ ಅವರು ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಕ್ರಮವಾಗಿ ಎಚ್.ಸಿ.ಬಾಲಕೃಷ್ಣ, ಕೆ.ಎಸ್.ಬಸವಂತಪ್ಪ, ಬಸವರಾಜ್ ರಾಯರೆಡ್ಡಿ, ಎನ್.ಚಲುವರಾಯಸ್ವಾಮಿ, ಲಕ್ಷ್ಮಣ್ ಸವದಿ, ಮಧು ಬಂಗಾರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಬಿ.ನಾಗೇಂದ್ರ, ಪಿ.ಎಂ.ನರೇಂದ್ರಸ್ವಾಮಿ, ಸಿ.ಪುಟ್ಟರಂಗಶೆಟ್ಟಿ, ಟಿ.ರಘುಮೂರ್ತಿ, ರಿಜ್ವಾನ್ ಅರ್ಷದ್, ರುದ್ರಪ್ಪ ಲಮಾಣಿ, ಸಂತೋಷ್ ಲಾಡ್, ಶಿವಲಿಂಗೇಗೌಡ, ಶಿವರಾಜ್ ತಂಗಡಗಿ, ವಿಜಯಾನಂದ ಕಾಶಪ್ಪನವರ್, ಜಮೀರ್ ಅಹ್ಮದ್ ಖಾನ್ ಅವರು ಪ್ರಮಾಣವಚನ ಸ್ವೀಕರಿಸಿದರು. ಈ ನಡುವೆ ಪ್ರಮಾಣವಚನ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿದ್ದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಗಾಯತ್ರಿ ಶಾಂತೇಗೌಡರಿಗೆ ಕೊನೆ ಕ್ಷಣದಲ್ಲಿ ಶಾಕ್
ಇದಕ್ಕೂ ಮುನ್ನ, ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು 20 ಸಚಿವರ ಹೆಸರುಗಳನ್ನು ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿರುವ ಬಗ್ಗೆ ಮಾಹಿತಿ ನೀಡಿದ್ದರು.
ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿದ ಅಂತಿಮ ಪಟ್ಟಿಯಲ್ಲಿದ್ದ ನೂತನ ಎಂ.ಎಲ್.ಸಿ. ಚಿಕ್ಕಮಗಳೂರಿನ ಶ್ರೀಮತಿ ಗಾಯತ್ರಿ ಶಾಂತೇಗೌಡ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿಲ್ಲ. ಕೊನೇ ಕ್ಷಣದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಮಹಿಳಾ ಶಾಸಕರ ನಡುವಿನ ತೀವ್ರ ಪೈಪೋಟಿಯೇ ಇದಕ್ಕೆ ಕಾರಣ ಎನ್ನಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೇಸ್ ಶಾಸಕರು ಇದ್ದರೂ ಈ ಬಾರಿಯೂ ಒಂದೇ ಒಂದು ಸಚಿವ ಸ್ಥಾನ ನೀಡದೇ ಜಿಲ್ಲೆಗೆ ಮತ್ತೆ ನಿರಾಸೆ ಮಾಡಲಾಗಿದೆ.


