ತಿಂಗಳ ಹಿಂದಷ್ಟೇ ಮದುವೆ ನಿಶ್ಚಿತಾರ್ಥವಾಗಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನ 25 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. ಮೃತ ಅಭಿಷೇಕ್ ಗೆ ಕಳೆದ ತಿಂಗಳಷ್ಟೆ ಮದುವೆ ನಿಶ್ಚಯವಾಗಿದ್ದು ಮುಂದಿನ ತಿಂಗಳು 25ಕ್ಕೆ ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಎರಡೂ ಮನೆಯವರು ಮದುವೆ ಸಂಭ್ರಮದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ರೆ ಅಭಿಷೇಕ್ 4 ದಿನದ ಹಿಂದೆ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು.
ಕೂಡಲೇ ಆತನನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿತ್ತು. ಆದರೆ, ನಾಲ್ಕು ದಿನದ ನಿರಂತರ ಚಿಕಿತ್ಸೆ ಬಳಿಕವೂ ಆತ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ತಿಂಗಳಲ್ಲಿ ಮದುವೆ ಇದ್ದ ಮನೆಗಳಲ್ಲೀಗ ಸೂತಕದ ಛಾಯೆ ಆವರಿಸಿದೆ. ಅಭಿಷೇಕ್ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬಾಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.


