November 17, 2026
;
ramesh daradahalli

 

 

ಮೂಡಿಗೆರೆ ಹ್ಯಾಂಡ್‍ಪೋಸ್ಟ್‍ನಿಂದ  ಮೂಗ್ತಿಹಳ್ಳಿವರೆಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 173ರ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ, ಪರಿಹಾರ ಪಾವತಿ, ಮರಗಳ ತೆರವು ಸೇರಿದಂತೆ ವಿವಿಧ ಪ್ರಕ್ರಿಯೆಗಳು ನಡೆಯುತ್ತಿದ್ದು, ಕಾಮಗಾರಿಗೆ ಹೆಚ್ಚಿನ ವೇಗವನ್ನು ನೀಡಿ ಅನುಷ್ಠಾನಗೊಳಿಸಬೇಕೆಂದು ರೈತ ಸಂಘದ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್‍ಗೌಡ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಸ್ತೆ ವಿಸ್ತರಣೆಗೆ ಅಗತ್ಯವಿರುವ ಮರಗಳ ತೆರವು ಕಾರ್ಯ ಕೈಗೊಳ್ಳಲು ಮೆಸ್ಕಾಂ ಇಲಾಖೆಯು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ಹೊಸ ವಿದ್ಯುತ್ ಮಾರ್ಗ ಅಳವಡಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಅಧಿಕಾರಿಗಳು ವಿಳಂಬ ಮಾಡದೆ ಅಗತ್ಯ ಕ್ರಮ ಕೈಗೊಂಡು ರಸ್ತೆ ವಿಸ್ತರಣೆಗೆ ಸಹಕರಿಸಬೇಕು. ಈ ರಸ್ತೆಯ ಇಕ್ಕೆಲಗಳಲ್ಲಿರುವ ಸಾಲುಮರಗಳು ಹಿಂದಿನ ರಾಜರ ಕಾಲದಲ್ಲಿ ಗ್ರಾಮಸ್ಥರು ಬೆಳೆಸಿದ್ದಾರೆ. ಈ ಮರಗಳು ಮಲೆನಾಡಿನ ಪರಿಸರ ಸೌಂದರ್ಯ ಹಾಗೂ ಹಸಿರಿನ ಪ್ರತೀಕವಾಗಿವೆ. ಹಾಗಾಗಿ ಮರಗಳ ತೆರವು ವಿಚಾರದಲ್ಲಿ ಪರಿಸರ ಪ್ರೇಮಿಗಳ ಕಾಳಜಿ ಸಹಜ. ಆದರೆ, ಸಾರ್ವಜನಿಕರ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆ ದೃಷ್ಟಿಯಿಂದ ರಸ್ತೆ ವಿಸ್ತರಣೆಯೂ ಅಷ್ಟೇ ಅಗತ್ಯವಾಗಿದೆ.

ಮರಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಮರಕ್ಕೆ ಪರ್ಯಾಯವಾಗಿ ಹತ್ತು ಪಟ್ಟು ಅಧಿಕ ಗಿಡ ನೆಟ್ಟು ಪೋಷಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅರಣ್ಯ ಇಲಾಖೆಗೆ ಅನುದಾನ ಒದಗಿಸಿದೆ. ಹೀಗಾಗಿ ರಸ್ತೆ ವಿಸ್ತರಣೆಯ ಹೆಸರಿನಲ್ಲಿ ಮರಗಳನ್ನು ತೆರವುಗೊಳಿಸಿದರೆ, ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ನೆಟ್ಟು, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆಗಳು ವಹಿಸಿಕೊಳ್ಳಬೇಕು. ಮುಖ್ಯವಾಗಿ ಮೂಡಿಗೆರೆ ಪಟ್ಟಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರತಿನಿತ್ಯ ವಾಹನ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆ ಮಿತಿ ಮೀರಿದೆ. ಪ್ರವಾಸಿಗರ ವಾಹನ, ಸರಕು ಸಾಗಣೆ, ಆಂಬುಲೆನ್ಸ್ ಹಾಗೂ ಸ್ಥಳೀಯ ವಾಹನಗಳ ಸಂಚಾರಕ್ಕೆ ತೀವ್ರ ರೀತಿಯಲ್ಲಿ ತೊಡಕುಂಟಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ರಸ್ತೆ ವಿಸ್ತರಣೆ ಪರಿಹಾರ ಮಾರ್ಗವಾಗಿದ್ದು, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡಕ್ಕೂ ಸಮಾನ ಆದ್ಯತೆ ನೀಡುವ ಮೂಲಕ ಮೂಡಿಗೆರೆ–ಮೂಗುತಿಹಳ್ಳಿ ರಸ್ತೆ ವಿಸ್ತರಣೆ ಅನಗತ್ಯ ವಿಳಂಬ ಮಾಡದೇ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

 

 

Leave a Reply

Your email address will not be published. Required fields are marked *