ತನ್ನ ಗ್ರಾಮದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಬಡವರ ಮನೆಯಲ್ಲಿ ಸಾವು ಸಂಭವಿಸಿದರೆ ಅವರ ಅಂತಿಮ ಸಂಸ್ಕಾರಕ್ಕೆ ಆರ್ಥಿಕ ನೆರವು ನೀಡುವುದಾಗಿ ರೆಸಾರ್ಟ್ ಮಾಲೀಕರೊಬ್ಬರು ಘೋಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮೂಡಿಗೆರೆ ಸಕಲೇಶಪುರ ತಾಲ್ಲೂಕುಗಳ ಗಡಿಭಾಗದಲ್ಲಿರುವ ಹುರುಡಿ ಸಮೀಪದ ಚಕ್ಕುಡಿಗೆ ಗ್ರಾಮದ ಕಾಫಿ ಬೆಳೆಗಾರ ಮತ್ತು ಜಪದಕಲ್ಲು ರೆಸಾರ್ಟ್ ಮಾಲೀಕ ಸಿ.ಆರ್. ನೇಮಿರಾಜ್ ಇಂತಹ ನಿರ್ಧಾರ ಪ್ರಕಟಿಸಿ ಜನರ ಪ್ರೀತಿಗೆ ಪಾತ್ರರಾಗಿರುವವರು.
ತಮ್ಮ ಅಜ್ಜ ಅಜ್ಜಿ ಚಕ್ಕುಡಿಗೆ ದಿ. ಮೊಗಣ್ಣಗೌಡ, ದಿ. ಹೂವಮ್ಮ ಅವರ ಸ್ಮರಣಾರ್ಥ ಸ್ಥಳೀಯ ಚಕ್ಕುಡಿಗೆ ಮತ್ತು ಹೆಗ್ಗರವಳ್ಳಿ ಗ್ರಾಮದಲ್ಲಿ ಬಡವರ ಮನೆಯಲ್ಲಿ ಸಾವು ಸಂಭವಿಸಿದರೆ ಅವರ ಕುಟುಂಬಕ್ಕೆ ತಕ್ಷಣದ ನೆರವಾಗಿ ಐದು ಸಾವಿರ ಹಣ ನೀಡುವುದಾಗಿ ತಿಳಿಸಿದ್ದಾರೆ.

ಹೆಗ್ಗರವಳ್ಳಿಯ ಸೈಟ್ ಮನೆಯಲ್ಲಿ ಮೃತರಾದ ಕಿಟ್ಟು ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನಗಳನ್ನು ಸಲ್ಲಿಸಿ ಅವರ ಕುಟುಂಬದವರಿಗೆ ಐದು ಸಾವಿರ ನೆರವು ನೀಡಿದರು. ಅದೇ ಸಂದರ್ಭದಲ್ಲಿ ಅವರು ತಮ್ಮ ಗ್ರಾಮದಲ್ಲಿ ಯಾವುದೇ ಜಾತಿಯ ಬಡವರ ಮನೆಯಲ್ಲಿ ಸಾವು ಸಂಭವಿಸಿದರೆ ಜಪದಕಲ್ಲು ರೆಸಾರ್ಟ್ ವತಿಯಿಂದ ಮೃತರಾದ ದಿನದಂದೆ ಅಂತಿಮ ಸಂಸ್ಕಾರಕ್ಕೆ ರೂ 5000/- ರೂಪಾಯಿಗಳನ್ನು ನೆರವು ನೀಡುವುದಾಗಿ ಗ್ರಾಮಸ್ಥರುಗಳ ಸಮ್ಮುಖದಲ್ಲಿ ಘೋಷಣೆ ಮಾಡಿದ್ದಾರೆ.
ನೇಮಿರಾಜ್ ಅವರ ಈ ನಿರ್ಧಾರಕ್ಕೆ ಗ್ರಾಮಸ್ಥರು ಮತ್ತು ಸ್ನೇಹಿತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಚಕ್ಕುಡಿಗೆ ಗ್ರಾಮದ ನೇಮಿರಾಜ್ ಸ್ಥಳೀಯ ಕಿರುಗುಂದ ಗ್ರಾಮಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಸ್ಥಳೀಯ ಜನರ ಕಷ್ಟಸುಖಗಳಿಗೆ ಭಾಗಿಯಾಗುತ್ತಾ ಜನಾನುರಾಗಿಯಾಗಿದ್ದಾರೆ. ಪ್ರಸ್ತುತ ಅವರು ಚಕ್ಕುಡಿಗೆಯಲ್ಲಿ ನಿರ್ಮಿಸಿರುವ ಜಪದಕಲ್ಲು ಹೆಸರಿನ ರೆಸಾರ್ಟ್ ಉನ್ನತ ದರ್ಜೆಯಲ್ಲಿದ್ದು, ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.



