ಕಣ್ಣು ಹಾಯಿಸಿದಷ್ಟು ದೂರವೂ ಹಬ್ಬಿರುವ ಪ್ರಕೃತಿ, ಹಕ್ಕಿಗಳ ಕಲರವ, ಸುತ್ತ ಹೂ ಗಿಡ ಬಳ್ಳಿಗಳ ಮನಮೋಹಕ ದೃಶ್ಯ, ಈ ಅಪೂರ್ವ ದೃಶ್ಯಗಳನ್ನು ನೋಡುತ್ತಾ ಗಾಜಿನ ಮನೆಯಲ್ಲಿ ಕುಳಿತು ಪುಸ್ತಕ ಓದುವ ಅನುಭವ ಅವರ್ಣನೀಯ. ಅಂತಹ ಅನುಭವಕ್ಕೆ ಸಜ್ಜಾಗಿ ಓದುಗರಿಗೆ ಮುಕ್ತವಾಗಿದೆ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಓದಿನ ಗಾಜಿನ ಮನೆ.
ಮೂಡಿಗೆರೆಯಿಂದ ಮಂಗಳೂರು ಕಡೆಗೆ ಹೋಗುವ ಮಾರ್ಗದಲ್ಲಿ ಸಿಗುವ ಕೊಟ್ಟಿಗೆಹಾರದ ಹೊರವಲಯದಲ್ಲಿ ಪಶ್ಚಿಮ ಘಟ್ಟದ ಸುಂದರ ಮಡಿಲಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆ ಪುಸ್ತಕ ಪ್ರಿಯರು, ಪ್ರಕೃತಿ ಪ್ರಿಯರು ಮತ್ತು ತೇಜಸ್ವಿ ಅಭಿಮಾನಿಗಳನ್ನು ಆದರದಿಂದ ಸ್ವಾಗತಿಸಲು ಸಜ್ಜಾಗಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವೂ ಪ್ರತಿಷ್ಠಾನಕ್ಕೆ ಬರುವ ತೇಜಸ್ವಿ ಅವರ ಓದುಗರಿಗಾಗಿ ಪ್ರಶಾಂತವಾದ ಪರಿಸರದಲ್ಲಿ ಕೆಲಕಾಲ ಕುಳಿತು ಓದುವುದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಓದಿನ ಗಾಜಿನ ಕೊಠಡಿಯನ್ನು ನಿರ್ಮಾಣ ಮಾಡಿದ್ದು ತೇಜಸ್ವಿ ಅವರ ಎಲ್ಲಾ ಪುಸ್ತಕಗಳನ್ನು ಇಲ್ಲಿ ಓದಬಹುದಾಗಿದೆ.
ಯಾವ ಗಲಾಟೆ ಗದ್ದಲಗಳೂ ಇಲ್ಲದೇ ಸುತ್ತ ಗಾಜಿನ ಗೋಡೆಗಳಾಚೆ ಕಾಣುವ ಹಸಿರು ಸೌಂದರ್ಯವನ್ನು ಆಸ್ವಾಧಿಸುತ್ತಾ ಹಕ್ಕಿಗಳ ಚಿಲಿಪಿಲಿಗಳನ್ನು ಕೇಳುತ್ತಾ ತೇಜಸ್ವಿ ಅವಬರ ಕೃತಿಗಳನ್ನು ಓದಬಹುದಾಗಿದೆ. ಪುಸ್ತಕ ಓದಿನ ಜೊತೆಗೆ ಹಬೆಯಾಡುವ ಬಿಸಿಯಾದ ಕಾಫಿಯೂ ಸಿಗಲಿದೆ.

‘ತೇಜಸ್ವಿ ಪ್ರತಿಷ್ಠಾನಕ್ಕೆ ಬರುವ ತೇಜಸ್ವಿ ಅವರ ಅಭಿಮಾನಿಗಳು, ಓದುಗರಿಗೆ ಪ್ರಶಾಂತವಾದ ವಾತಾವರಣದಲ್ಲಿ ಕುಳಿತು ಓದಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಓದಿನ ಕೊಠಡಿಯನ್ನು ನಿರ್ಮಿಸಲಾಗಿದೆ. ತೇಜಸ್ವಿ ಅವರ ಬದುಕು ಬರಹ ಚಿಂತನೆಗಳನ್ನು ಸಾಕಾರಗೊಳಿಸಲು ತೇಜಸ್ವಿ ಪ್ರತಿಷ್ಠಾನ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ’
ಪುಸ್ತಕ ಪ್ರಿಯರು, ಪ್ರಕೃತಿ ಪ್ರಿಯರು ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
-ಡಾ. ಸಿ ರಮೇಶ್, ಸದಸ್ಯ ಕಾರ್ಯದರ್ಶಿಗಳು, ತೇಜಸ್ವಿ ಪ್ರತಿಷ್ಠಾನ



