ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ನಾಳೆ ಕರ್ನಾಟಕ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ವಿವಿಧ ಕನ್ನಡ ಪರ ಸಂಘಟನೆಗಳು, ರೈತಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ನಾಳೆ ಬಂದ್ ಯಶಸ್ವಿಯಾಗಿ ಮಾಡಬೇಕು ಈ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸಬೇಕು, ಕಾವೇರಿ ನ್ಯಾಯಮಂಡಳಿಯ ಗಮನ ಸೆಳೆಯಬೇಕು ಎಂದು ಸಂಘಟನೆಗಳು ಬಹಳಷ್ಟು ತಯಾರಿ ನಡೆಸುತ್ತಿವೆ.
ನಾಳೆ ಬಹುತೇಕ ರಾಜ್ಯ ಸ್ತಬ್ದವಾಗಲಿದ್ದು, ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಲಿದೆ. ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಸಹ ವಿವಿಧ ಕನ್ನಡಪರ, ರೈತಪರ ಸಂಘಟನೆಗಳು, ವಿವಿಧ ಸಂಘಸಂಸ್ಥೆಗಳು ಬಂದ್ ಗೆ ತಮ್ಮ ಬೆಂಬಲ ಸೂಚಿಸಿವೆ ಮತ್ತು ಸಾರ್ವಜನಿಕರು ಬಂದ್ ಗೆ ಸಹಕಾರ ನೀಡಬೇಕು ಎಂದು ಕೋರಿವೆ.
ನಾಳೆ ರಾಜ್ಯ ಬಂದ್ ಇರುವ ಹಿನ್ನಲೆಯಲ್ಲಿ ಜನರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಇದು ನಾಡಿನ ಜನರ ಜೀವನದ ಪ್ರಶ್ನೆಯಾಗಿರುವುದರಿಂದ ಎಲ್ಲರೂ ಸ್ವಯಂಪ್ರೇರಿತರಾಗಿ ಬಂದ್ ಗೆ ಬೆಂಬಲ ನೀಡಬೇಕಾಗಿದೆ ಎಂದು ಸಂಘಟನೆಯ ಮುಖಂಡರು ಮನವಿ ಮಾಡಿದ್ದಾರೆ.
ಅನೇಕ ಶಾಲಾ ಕಾಲೇಜುಗಳಲ್ಲಿ ಮಧ್ಯವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ನಾಳೆ ಬಸ್ ಮತ್ತು ಖಾಸಗಿ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ನಾಳೆ ಆಸ್ಪತ್ರೆ, ಮೆಡಿಕಲ್ ಸೇವೆ ಹೊರತುಪಡಿಸಿ ಬಹುತೇಕ ಅಂಗಡಿ ಮುಗ್ಗಟ್ಟುಗಳು, ಹೋಟೆಲ್ ಗಳು ಬಂದ್ ಆಗುವ ಸಾಧ್ಯತೆ ಇದೆ. ಸಂತೆಗಳು ನಡೆಯುವುದು ಅನುಮಾನ. ವಾಹನ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಒತ್ತಾಯಪೂರ್ವಕ ಬಂದ್ ಗೆ ಅವಕಾಶ ಇಲ್ಲ. ಕಾನೂನು ಸುವ್ಯವಸ್ಥೆಗೆ ದಕ್ಕೆ ತಂದರೆ ಸೂಕ್ತ ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.



