ಗಾಯಕ ಬಕ್ಕಿ ಮಂಜುನಾಥ್ ಅವರು ಸತತ 12 ಗಂಟೆಗಳ ಕಾಲ ಹಾಡುಗಾರಿಕೆಯಿಂದ ವಿಶಿಷ್ಟ ಸಾಧನೆಗೆ ಮುಂದಾಗಿದ್ದಾರೆ, ಈ ಸಾಧನೆ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಅವಿನ್ ಸ್ವರ ಸಂಗಮ ಫೇಸ್ಬುಕ್ ಪೇಜ್ ನಲ್ಲಿ ನೇರ ಪ್ರಸಾರವಾಗಲಿದೆ ಎಂದು ಅವಿನ್ ಸ್ವರ ಸಂಗಮ ನಿರ್ದೇಶಕ ಗಣೇಶ್ ಮಗ್ಗಲಮಕ್ಕಿ ತಿಳಿಸಿದ್ದಾರೆ.
ಶನಿವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ; ಬಕ್ಕಿ ಮಂಜುನಾಥ್ ಅವರು ಹಲವು ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಯುವಜನ ಮೇಳಗಳು, ಜಾನಪದ ಸಮ್ಮೇಳನಗಳಲ್ಲಿ ಇವರು ತಮ್ಮ ಪ್ರತಿಭೆಯಿಂದ ಗಮನ ಸೆಳೆದಿದ್ದಾರೆ. ಹಲವಾರು ಯುವ ಗಾಯಕರಿಗೆ ತರಬೇತಿ ನೀಡಿರುತ್ತಾರೆ. ಕಳೆದ ಮೂರು ವರ್ಷಗಳಿಂದ ಅವಿನ್ ಸ್ವರ ಸಂಗಮ ಫೇಸ್ಬುಕ್ ಲೈವ್ ಕಾರ್ಯಕ್ರಮದ ಮೂಲಕ ಅನೇಕ ಪ್ರತಿಭಾವಂತ ಗಾಯಕರನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ.
ಇದೀಗ ನವೆಂಬರ್ 26ರಂದು ಭಾನುವಾರ ಅವಿನ್ ಸ್ವರ ಸಂಗಮ 333 ನೇ ಸಂಚಿಕೆಯಲ್ಲಿ 12 ಗಂಟೆಗಳ ಅವಧಿಯಲ್ಲಿ 103 ಹಾಡುಗಳನ್ನು ಹಾಡಲಿದ್ದಾರೆ. ಈ ಮೂಲಕ ವಿಶಿಷ್ಟ ಸಾಧನೆಯೊಂದನ್ನು ಮಾಡಲಿದ್ದಾರೆ ಎಂದರು. ಇದು ವರ್ಲ್ಡ್ ವೈಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಇದು ದಾಖಲೆಯಾಗಲಿದೆ ಎಂದಿದ್ದಾರೆ.

ಗಾಯಕ ಬಕ್ಕಿ ಮಂಜುನಾಥ್ ಮಾತನಾಡಿ ; ಇದು ನನಗೆ ಒಂದು ವಿಶೇಷ ಅನುಭವವಾಗಿದ್ದು, ಭಾನುವಾರ 10-30ರಿಂದ ರಾತ್ರಿ 10-30 ರ ವರೆಗೆ ನಿರಂತರ ಹಾಡುಗಳನ್ನು ಹಾಡಲಿದ್ದು, ಭಕ್ತಿಗೀತೆ, ಭಾವಗೀತೆ, ಚಿತ್ರಗೀತೆ, ಜಾನಪದ ಗೀತೆಗಳನ್ನು ಒಳಗೊಂಡ ವಿಶೇಷ ಗೀತೆಗಳನ್ನು ಹಾಡಲಿದ್ದೇನೆ. ಇದಕ್ಕೆ ನನಗೆ ಅನೇಕ ಮಂದಿ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಗಾಯನ ಕಾರ್ಯಕ್ರಮವು ಅವಿನ್ ಸ್ವರಸಂಗಮ ಫೆಸ್ಬುಕ್ ಪೇಜ್ ನಲ್ಲಿ ನೇರ ಪ್ರಸಾರವಾಗಲಿದೆ. ಎಲ್ಲರೂ ಈ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಅವಿನ್ ಸ್ವರ ಸಂಗಮದ ನಿರ್ದೇಶಕರಾದ ಶ್ರೀಮತಿ ಸುಚಿತ್ರ ಪ್ರಸನ್ನ, ರವೀಂದ್ರ ಬಕ್ಕಿ, ಸಂತೋಷ್ ಭಾವಿಮನೆ ಉಪಸ್ಥಿತರಿದ್ದರು.


