ಅಡಿಕೆ ಕಳ್ಳತನಕ್ಕಾಗಿ ಅಡಿಕೆ ಮರಗಳನ್ನೇ ಕಡಿದಿರುವ ಇಬ್ಬರನ್ನು ಬಂಧಿಸಲಾಗಿದೆ.
ಮೂಡಿಗೆರೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಹೆಸಗಲ್ ಗ್ರಾಮ ಶಕ್ತಿನಗರದ ಎಂ.ಪಿ.ದಿವಾಕರ್ ಅವರ ತೋಟದಲ್ಲಿ ಅಡಿಕೆ ಮರ ಕಡಿದು ಕಳ್ಳತನ ಮಾಡಲಾಗಿದೆ. ತೋಟಕ್ಕೆ ಮಧ್ಯರಾತ್ರಿ ನುಗ್ಗಿ ಕಳ್ಳತನ ಮಾಡಿದ್ದ ವಿಡಿಯೊ ಸಮೀಪದ ಕೆಲವು ಕಟ್ಟಡಗಳಲ್ಲಿ ಇದ್ದ ಸಿಸಿ ಟಿವಿಯಲ್ಲಿ ಸೆರೆಯಾದ ಹಿನ್ನಲೆಯಲ್ಲಿ ತೋಟದ ಮಾಲಿಕ ಎಂ.ಪಿ.ದಿವಾಕರ್ ಪೊಲೀಸರಿಗೆ ದೂರು ನೀಡಿದ್ದರು.
ಸಿ.ಸಿ. ಕ್ಯಾಮರದಲ್ಲಿ ದೃಶ್ಯವನ್ನು ಆದರಿಸಿ ದಿವಾಕರ್ ಅವರು ದೂರು ನೀಡಿದ ಹಿನ್ನಲೆಯಲ್ಲಿ ಮೂಡಿಗೆರೆ ಪೊಲೀಸರು ಹೆಸಗಲ್ ಗ್ರಾಮದ ಲಕ್ಷ್ಮಣ ಹಾಗೂ ಬೊಮ್ಮಯ್ಯ ಎಂಬ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ವಿಚಾರಣೆ ಸಂದರ್ಭದಲ್ಲಿ ಕಳ್ಳತನ ಮಾಡಿರುವುದನ್ನು ಕಳ್ಳರು ಒಪ್ಪಿಕೊಂಡಿದ್ದಾರೆ.
. ಕಳವು ಮಾಡಿದ ಅಡಿಕೆಗಳನ್ನು ಹಾಗೂ ಕಾಫಿಯನ್ನು ಕೆ ಎಂ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್ ಸಮೀಪದಲ್ಲಿರುವ ಹಾಗೂ ಎಂ.ಎ ರಸ್ತೆಯಲ್ಲಿರುವ ವ್ಯಾಪಾರಿಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದು ಕಳವು ಮಾಡಿದ್ದ ಕಾಫಿಬೀಜ ಹಾಗೂ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ತೋಟದ ಮಾಲೀಕರು ಕಳವು ಮಾಡಿದ ಅಡಿಕೆಯ ಬೆಲೆ 50 ಸಾವಿರಕ್ಕೂ ಅಧಿಕವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತೋಟದಲ್ಲಿ ಏಳೆಂಟು ದೊಡ್ಡ ಅಡಿಕೆ ಮರಗಳನ್ನೇ ಕಡಿದು ಅದರಲ್ಲಿ ಬಿಟ್ಟಿದ್ದ ಅಡಿಕೆಯನ್ನು ಕಳ್ಳತನ ಮಾಡಿದ್ದಾರೆ. ಇನ್ನು ಕೆಲವು ಮರಗಳನ್ನು ಮೇಲೆ ಏರಿ ಅಡಿಕೆ ಕಳ‍್ಳತನ ಮಾಡಿರುತ್ತಾರೆ. ಬುಡಕ್ಕೆ ಕಡಿದಿರುವ ಮರಗಳು ಸುಮಾರು 20 ರಿಂದ 25 ವರ್ಷ ವಯಸ್ಸಿನವು. ಇಷ್ಟು ವರ್ಷ ಜೋಪಾನದಿಂದ ಸಾಕಿದ್ದ ಅಡಿಕೆ ಮರಗಳನ್ನು ಬುಡಸಮೇತ ಕಡಿದಿರುವುದನ್ನು ಕಂಡು ತೋಟದ ಮಾಲೀಕರು ತೀವ್ರ ಸಂಕಟ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ.

ಮಲೆನಾಡು ಭಾಗದಲ್ಲಿ ಈಗ ಅಡಿಕೆ, ಕಾಫಿ, ಕಾಳುಮೆಣಸು ಕೊಯ್ಲಿನ ಸಮಯ ಬಂದಿದ್ದು, ಬೆಳೆಗಾರರು ಕಳ್ಳರಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಮುಂಜಾಗೃತ ಕ್ರಮ ವಹಿಸಬೇಕಾಗಿದೆ.
ತೋಟಗಳಲ್ಲಿ ಕಳ್ಳತನ ಮಾಡುವವರ ವಿರುದ್ಧ ದೂರು ನೀಡಿದರೆ ಪೊಲೀಸರು ಕಠಿಣ ಶಿಕ್ಷೆಯಾಗುವಂತಹ ಸೂಕ್ತ ಸೆಕ್ಷನ್ ಹಾಕಬೇಕು. ಇಲ್ಲದೇ ಇದ್ದರೆ ಕಳ್ಳರು ಒಂದೇ ದಿನಕ್ಕೆ ಜಾಮೀನು ಪಡೆದು ಹೊರಬಂದು ಮತ್ತೆ ಕಳ್ಳತನ ಕೃತ್ಯದಲ್ಲಿ ತೊಡಗುತ್ತಾರೆ ಎಂದು ಬೆಳೆಗಾರರ ಸಂಘಟನೆಗಳು ಒತ್ತಾಯಿಸಿವೆ.


