ಸುಮಾರು 80 ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅಬೂಬಕ್ಕರ್ ಆಲಿಯಾಸ್ ಇತ್ತೆ ಬರ್ಪೆ ಅಬೂಬಕ್ಕರ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿ ಕಳ್ಳತನ ಪ್ರಕರವೊಂದರಲ್ಲಿ ಅಬೂಬಕ್ಕರ್(64 ವರ್ಷ) ನನ್ನು ಅರೆಸ್ಟ್ ಮಾಡಲಾಗಿದೆ.
ವಾರದ ಹಿಂದೆ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲ ಎಂಬಲ್ಲಿ ಮನೆಯೊಂದರಲ್ಲಿ ಆಭರಣ ಕಳ್ಳತನ ಹಾಗೂ ಮತ್ತೊಂದು ಮನೆಯಲ್ಲಿ ಸ್ಕೂಟಿ ಕಳ್ಳತನಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರನ್ನು ಆದರಿಸಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಬೂಬಕ್ಕರ್ ಸಿಕ್ಕಿಬಿದ್ದಿದ್ದಾನೆ.
ಕೆದಿಲದ ರಮ್ಲಾಕುಇó ಎಂಬುವವರ ಮನೆಯಿಂದ ಅಂದಾಜು 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇಸುಬು ಬ್ಯಾರಿ ಎನ್ನುವವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳುವು ಮಾಡಿದ್ದ ಸ್ಕೂಟಿಯನ್ನು ಬೇರೊಂದು ಕಡೆ ನಿಲ್ಲಿಸಿದ್ದ ಎನ್ನಲಾಗಿದೆ. ಸೋಮವಾರ ರಾತ್ರಿ ಸ್ಕೂಟಿಯನ್ನು ತೆಗೆದುಕೊಂಡು ಹೋಗಲು ಬಂದಿದ್ದು, ಈ ಸಂದರ್ಭದಲ್ಲಿ ಪೊಲೀಸರು ಅಬೂಬಕ್ಕರ್ ನನ್ನು ಬಂಧಿಸಿದ್ದಾರೆ. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಡಿಸೆಂಬರ್ 19ರ ವರೆಗೆ ಅಬೂಬಕ್ಕರ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಚಿಕ್ಕಮಗಳೂರು ಮೂಲದ ಅಬೂಬಕ್ಕರ್
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತ್ಯದಿಕ ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬೂಬಕ್ಕರ್ ಚಿಕ್ಕಮಗಳೂರು ಮೂಲದವನು ಎಂದು ತಿಳಿದುಬಂದಿದೆ. ಇವನಿಗೆ ಇತ್ತೆ ಬರ್ಪೆ ಅಬೂಬಕ್ಕರ್ ಎಂದು ಜನರು ಕರೆಯುತ್ತಿದ್ದರು. ಇವನು ಯಾರೇ ಸಿಕ್ಕರೆ ತುಳುಭಾಷೆಯಲ್ಲಿ ಇತ್ತೆ ಬರ್ಪೆ(ಈಗ ಬರ್ತೀನಿ) ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಹಾಗಾಗಿ ಎಲ್ಲರೂ ಇವನನ್ನು ಇತ್ತೆ ಬರ್ಪೆ ಅಬೂಬಕ್ಕರ್ ಎಂದೇ ಕರೆಯುತ್ತಿದ್ದರು. ಆತ ತನ್ನ ದ್ವಿಚಕ್ರ ವಾಹನಕ್ಕೂ ಇತ್ತೆ ಬರ್ಪೆ ಎಂದು ಸ್ಟಿಕ್ಕರ್ ಹಾಕಿಕೊಂಡಿದ್ದ.
ಅಬೂಬಕ್ಕರ್ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಮೂಲದವನು ಎಂದು ತಿಳಿದುಬಂದಿದೆ. ಈತ ಈ ಹಿಂದೆ ಚಿಕ್ಕಮಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು ರಾತ್ರಿವೇಳೆ ತನ್ನ ದ್ವಿಚಕ್ರ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಅಲ್ಲಿ ಮನೆಗಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಈತ ವಿಟ್ಲ ಸಮೀಪದ ಕಡಂಬು ಎಂಬಲ್ಲಿ ವಾಸವಾಗಿದ್ದ ಎನ್ನಲಾಗಿದೆ.
ಈತನ ಬಂಟ್ವಾಳ, ಪುತ್ತೂರು, ಕಾರ್ಕಳ, ಉಡುಪಿ, ಚಿಕ್ಕಮಗಳೂರು, ಮಂಗಳೂರು, ಸುರತ್ಕಲ್, ಮೂಡಬಿದಿರೆ ಮುಂತಾದ ಕಡೆಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಚಾಣಾಕ್ಷತನದಿಂದ ಕಳ್ಳತನ ಮಾಡಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಾ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಎನ್ನಲಾಗಿದೆ.
ಈತನಿಂದ 121 ಗ್ರಾಂ ಚಿನ್ನ, ಎರಡು ದ್ವಿಚಕ್ರ ವಾಹನ, 3.5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈತ ಕಳ್ಳತನ ಮಾಡಿ ಬಂದ ಹಣದಲ್ಲಿ ಶೋಕಿ ಜೀವನ ಮಾಡುವುದನ್ನು ಖಯಾಲಿ ಮಾಡಿಕೊಂಡಿದ್ದ ಎನ್ನಲಾಗಿದೆ. ಈತ ಕೇರಳ ರಾಜ್ಯದಲ್ಲಿಯೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.


