ಪರಿಸರ ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಆ ಮೂಲಕ ಸಾಮಾಜಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಬಣಕಲ್ ಬಾಲಿಕ ಮರಿಯ ಚರ್ಚ್ ಧರ್ಮಗುರು ಫಾ.ಥಾಮಸ್ ಕಲಘಟಗಿ ಹೇಳಿದರು.
ಅವರು ಭಾನುವಾರ ಬಣಕಲ್ ಬಾಲಿಕ ಮರಿಯ ಚರ್ಚಿನಲ್ಲಿ ಐಸಿವೈಎಂ ಯುವ ಘಟಕದ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಮುಂದಿನ ಪೀಳಿಗೆಗೆ ಸ್ವಚ್ಚ ಹಸಿರು ಪರಿಸರ ಉಳಿಸಿ ಬೆಳೆಸುವ ಅಗತ್ಯವಿದ್ದು, ಗಿಡ ಮರಗಳನ್ನು ಬೆಳೆಸಿ ಸ್ವಚ್ಚ ವಾತಾವರಣ ಸೃಷ್ಟಿಸುವ ಅನಿವಾರ್ಯತೆ ಇದೆ’ ಎಂದರು ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಹರ್ಷ ಮೆಲ್ವಿನ್ ಲಸ್ರಾದೊ ಮಾತನಾಡಿ ‘ಇಂದಿನ ಪರಿಸ್ಥಿತಿಯಲ್ಲಿ ಸಾಮಾಜಿಕ ಪರಿಸರ ಸಮತೋಲನವನ್ನು ಕಾಪಾಡಲು ಪರಿಸರದಲ್ಲಿ ಹಸಿರು ಕ್ರಾಂತಿಯಾಗಬೇಕು. ಪ್ರತಿಯೊಬ್ಬರು ಶಾಲಾಮಟ್ಟದಿಂದ ಹಿಡಿದು ಹಿರಿಯರವರೆಗೂ ಪರಿಸರದಲ್ಲಿ ಒಂದೊಂದು ಉತ್ತಮ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕು, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡಲು ನಾವೆಲ್ಲರೂ ಪಣ ತೊಡಬೇಕು’ ಎಂದರು.
ಚರ್ಚಿನ ಆವರಣದಲ್ಲಿ ಗಿಡ ನೆಟ್ಟು ಯುವಕರು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಧರ್ಮಗುರು ಫಾ.ರೋನಿ ಡಿಸೋಜ, ಐಸಿವೈಎಂ ಘಟಕದ ಅಧ್ಯಕ್ಷ ಲಾಯ್ಡ್ ರೊಡ್ರಿಗಸ್, ಉಪಾಧ್ಯಕ್ಷೆ ಡೈನೆಟ್ ಡಿಸೋಜ, ಸದಸ್ಯರಾದ ದಿಲ್ಸಿನ್ ಡಿಸೋಜ, ಅನಿಶಾ ಮೊಂತೆರೊ, ಅರುಣ್ ಮೊಂತೆರೊ, ರುಡಾಲ್ಫ್, ಸಂಜನಾ ಮೊಂತೆರೊ, ಅರ್ಪಿತಾ, ಆಸ್ಟಿನ್, ಆಲ್ವಿನ್, ಅವಿನಾಶ್, ಅಭಿಷೇಕ್, ದೀಕ್ಷನ್, ಜಾಯ್ಸನ್, ಸ್ಮಿತಾ, ಕ್ರೈಸ್ತ ಭಕ್ತರಾದ ಹಿಲ್ಡಾ ಮೊಂತೆರೊ, ಪ್ರವೀಣ್, ಐರಿನ್ ರೊಡ್ರಿಗಸ್, ಅನಿತಾ, ಮ್ಯಾಕ್ಸಿಂ, ಪೆಡ್ಡಿ ಡಿಸೋಜ ಮತ್ತಿತರರು ಇದ್ದರು.



