ಚಿಕ್ಕಮಗಳೂರು ನಗರದಲ್ಲಿ ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿದ್ದ ಹಿನ್ನಲೆಯಲ್ಲಿ ರಚಿಸಿದ್ದ ವಿಶೇಷ ಪೊಲೀಸ್ ತಂಡವು 3 ಜನ ಅಂತರ್ ಜಿಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳಿಂದ ರೂ. 8.5 ಲಕ್ಷ ಬೆಲೆಯ 17 ಬೈಕ್ ಗಳು, ರೂ. 2.15 ನಗದು ಮತ್ತು ರೂ. 50 ಸಾವಿರ ಮೌಲ್ಯದ ಬೈಕ್ ಬಿಡಿಭಾಗಗಳನ್ನು ವಶಪಡಿಸಿಕೊಂಡಿರುತ್ತಾರೆ.
ಬಂಧಿತರನ್ನು ಖಯ್ಯುಮ್ ಪಾಷಾ, ನವೀನ್ ಕುಮಾರ್ ಮತ್ತು ಉಮರ್ ಬೇಗ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಚಿಕ್ಕಮಗಳೂರು ನಗರದಲ್ಲಿ 22 ಬೈಕ್, ಕಡೂರು ಪಟ್ಟಣದಲ್ಲಿ 1 ಬೈಕ್, ತರೀಕೆರೆ ಪಟ್ಟಣದಲ್ಲಿ 1 ಬೈಕ್, ಶಿವಮೊಗ್ಗ ನಗರದಲ್ಲಿ 2 ಬೈಕ್, ಭದ್ರಾವತಿಯಲ್ಲಿ 2 ಬೈಕ್ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ 2 ಬೈಕ್ ಗಳನ್ನು ಕಳವು ಮಾಡಿದ್ದು, ಅವುಗಳಲ್ಲಿ 17 ಬೈಕ್ ಸುಸ್ಥಿತಿಯಲ್ಲಿದ್ದು, 13 ಬೈಕ್ ಗಳನ್ನು ಗುಜರಿಗೆ ಮಾರಾಟ ಮಾಡಿರುತ್ತಾರೆ.
ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ, ಎಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಬಸವನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ಕಲೈಮಾರ್ ಮತ್ತು ಪಿ.ಎಸ್.ಐ. ಬಾಬುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಲಿಂಗಮೂರ್ತಿ, ಮಧಸೂಧನ್, ನಂಜಪ್ಪ, ಮಧುಕುಮಾರ್, ಪ್ರದೀಪ ಮತ್ತು ನವೀನ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಖದೀಮರನ್ನು ಹೆಡೆಮುರಿ ಕಟ್ಟಿದ ತಂಡಕ್ಕೆ ಎಸ್ಪಿ ವಿಕ್ರಂ ಅಮಟೆಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೈಕ್ ಸವಾರರಿಗೆ ಪೊಲೀಸರ ಸಲಹೆ
ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ರಾತ್ರಿ ವೇಳೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸದೇ, ಬೈಕ್ ನಲ್ಲಿ ಕೀ ಗಳನ್ನು ಬಿಡದಂತೆ, ಉತ್ತಮ ಗುಣಮಟ್ಟದ ಲಾಕ್ ಗಳನ್ನು ಹಾಗೂ ಬೈಕ್ ಜಿಪಿಎಸ್ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿಕೊಳ್ಳುವಂತೆ ಹಾಗೂ ದಾಖಲೆಗಳಿಲ್ಲದೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಬಾರದಾಗಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೋರಿದ್ದಾರೆ.



