navodaya1

 

 

1999ನೇ ಸಾಲಿನ ಜೂನ್-ಜುಲೈ ತಿಂಗಳ ಜಡಿಮಳೆಗಾಲದಲ್ಲಿ ನಮ್ಮ ಜೀವನದ ಬಹು ಕನಸುಗಳ ಹೊತ್ತು  ಹಚ್ಚ ಹಸುರಿನ  ಪ್ರಕೃತಿ ಸೌಂದರ್ಯದ   ನಡುವೆ ಇರುವ ನವೋದಯ ಶಾಲೆ ಎಂಬ ಪುಟ್ಟ ಪ್ರಪಂಚಕ್ಕೆ ಕಾಲಿಟ್ಟು, ಇಂದಿಗೆ ನಮಗೆಲ್ಲಾ-ನಮ್ಮ ಶಾಲೆಯ ನಂಟಿಗೆ ಬೆಳ್ಳಿ ಹಬ್ಬದ ದಿನಕ್ಕೆ ಓದುಗರಿಗೆ ಒಂದು ಸ್ವಾಗತ.

ಅಂದು ನಮ್ಮನ್ನು ಶಾಲೆಗೆ ದಾಖಲಿಸಿಕೊಂಡು ನಮ್ಮತಂದೆ ತಾಯಿ ಸ್ಥಾನದಲ್ಲಿ ನಿಂತು ಓದಿನ ಜೊತೆ  ನಲ್ಮೆಯಿಂದ ಸಾಕಿ ಸಲಹಿ ತಿದ್ದಿ ತೀಡಿದ ಗುರುವೃಂದಕ್ಕೆ ಗುರುವಂದನೆಗಳನ್ನು ಹೇಳುವ ಸುದಿನ. ಕೌತುಕದಿಂದ ನಾವು ನಮ್ಮ ಗುರುಗಳನ್ನು ನಮ್ಮ ಕುಟುಂಬದವರಿಗೆ ಪರಿಚಯ ಮಾಡುವ ದಿನ. ನಮ್ಮ ನಲ್ಮೆಯ ಗೆಳೆಯರ ಬಳಗದ ‘ಸಂಗಮ’ದ ದಿನ. ಇಂದು ನಾವು ನಡೆದು ಬಂದ ಸಪ್ತವರ್ಷಗಳ ದಾರಿಯನ್ನೊಮ್ಮೆ ಮೆಲುಕು ಹಾಕುವ ಸುದಿನ. ನಮ್ಮಲ್ಲಿರುವ ಖುಷಿ, ಸಂತೋಷಗಳನ್ನು ವ್ಯಕ್ತಪಡಿಸಲು ಪದಗಳು ಸಾಲದು.

ನಾವು ನಮ್ಮ ಶಾಲೆಯಲ್ಲಿ ಕಳೆದ ಏಳು ವರ್ಷಗಳ ಆ ಸುದಿನಗಳಲ್ಲಿ, ನಮ್ಮ ದಿನಚರಿ ಬೆಳಗ್ಗಿನ 5:45ರ ದೈಹಿಕ ಶಿಕ್ಷಣದೊಂದಿಗೆ ಶುರುವಾಗಿ ನಂತರ 7:00ಕ್ಕೆ ರುಚಿಕರವಾದ ಹಾಲನ್ನು ಕುಡಿದು, 7:20ರ ಶಾಲಾ ಪ್ರಾರ್ಥನೆ- ನವೋದಯ ಗೀತೆಯೊಂದಿಗೆ ದಿನ ಪ್ರಾರಂಭವಾಗುವ ನೆನಪು ಇನ್ನೂ ಮಾಸಿಲ್ಲ. ನಂತರ ನಮ್ಮ ಪಠ್ಯ ಚಟುವಟಿಕೆಗಳೊಂದಿಗೆ ಶುರುವಾದರೆ, ನಮ್ಮನ್ನು ಘಮ್ಮನೆಯ ಸುವಾಸನೆಯೊಂದಿಗೆ ಬರಮಾಡಿಕೊಳ್ಳುತ್ತಿದ್ದ ಭೋಜನಾಲಯ, ಇಂದಿಗೂ ಕೈಬೀಸಿ ನಮ್ಮನ್ನು ಬೇಗ ಬರುವಂತೆ ಕರೆದ ಅನುಭವಾಗುತ್ತಿದೆ. ನಂತರ ನಮ್ಮ ಪಠ್ಯಕ್ರಮಗಳ ಬೋಧನೆಗಳ ಜೊತೆಗೆ ನಮ್ಮಸಂಗೀತ, ಸಾಹಿತ್ಯ, ಕಲೆಗಳನ್ನು ಕಲಿತ ಆ ಮದುರ ದಿನಗಳನ್ನುಮೆಲುಕು ಹಾಕಿದರೆ ಇಂದೂ ನಮ್ಮ ಮನದಲ್ಲಿ ಅದೇನೋ ಪುಳಕ.

ಅಪರಾಹ್ನ 1:15ರ ಊಟ ಮುಗಿಸಿ, ವಸತಿ ನಿಲಯದ ಕಡೆಗೆ ಹೆಜ್ಜೆ ಇಟ್ಟೆವೆಂದರೆ 3ರ ತನಕ ನಮ್ಮ ಬಹುಪ್ರಿಯ ವೈಯಕ್ತಿಕ ಸಮಯ ಮತ್ತೆ 3 ಘಂಟೆಗೆ ಶುರುವಾಗುವ ದಿನದ ವ್ಯಾಸಂಗದ ಅವಧಿ. ಸಂಜೆ 4:15ರವರೆಗೆ ದೈನಂದಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಒಂದು ಅಭೂತಪೂರ್ವ ಸಮಯ. ನಂತರ ಭೋಜನಾಲಯಕ್ಕೆ ತೆರಳಿ ಲಘು ಪಹಾರ ಸೇವಿಸಿ, ಮಳೆ – ಬಿಸಿಲೆನ್ನದೆ ಮೈಮರೆತು ಆಟೋಟಗಳಲ್ಲಿ ಬೆರೆಯುವ ಸಮಯ ಎಷ್ಟಿದ್ದರೂ ಸಾಲದು ಎಂದೆನಿಸುತಿತ್ತು ನಂತರ ಸ್ವಲ್ಪ ಸಮಯದಲ್ಲೇ ಕೈಕಾಲು ಮುಖ ತೊಳೆದು 6:30ರಿಂದ 8.00 ರ ವರೆಗೆ ಅಧ್ಯಯನದ ಸಮಯ,  ರಾತ್ರಿಯ ಭೋಜನ ಮುಗಿಸಿ, 8:30ಕ್ಕೆ ವಸತಿ ನಿಲಯದ ಕಡೆ ಹೆಜ್ಜೆ ಹಾಕುತ್ತಾ, ದಾರಿಯಲ್ಲಿ ನಮ್ಮ ನೆಚ್ಚಿನ ಶಿಕ್ಷಕರಿಂದ ಸುತ್ತಮುತ್ತಲಿನ   ಪರಿಸರ, ರಾತ್ರಿಯ ನೀಲಾಕಾಶದ ವರ್ಣನೆಯ  ಬಗ್ಗೆ ತಿಳಿದುಕೊಳ್ಳುತ್ತಾ, ವಸತಿ ನಿಲಯವನ್ನು ಮುಟ್ಟುತ್ತಿದ್ದೆವು ಮತ್ತೆ ನಮ್ಮ ವಸತಿ ನಿಲಯಗಳನ್ನು ಶುಚಿಗೊಳಿಸಿ, ನಮ್ಮ ಮೇಲ್ವಿಚಾರಕರೊಂದಿಗೆ  ಮುಕ್ತವಾಗಿ ಚರ್ಚಿಸುವ ಸುವ್ಯವಸ್ಥೆ.

ಸುಂದರ ಪ್ರಕೃತಿ ಮಡಿಲಿನಲ್ಲಿರುವ  ತ್ರಿಕೋನ ಬೆಟ್ಟದ ತಪ್ಪಲಿನಲ್ಲಿರುವ  ಶಾಲೆಯಲ್ಲಿ  ಮಾವು, ಹಲಸು,  ಬಾಳೆ,  ತೆಂಗಿನ ಮರಗಳಲ್ಲಿನ ಮರಕೋತಿಯಾಟ, ಹಣ್ಣುಗಳನ್ನು ಸವಿದು ನಮ್ಮ ಚೇಷ್ಟೇ- ತುಂಟಾಟಗಳನ್ನು ಹೇಳತೀರದು. ಹೀಗೆ ನಮ್ಮೆಲ್ಲಾ ದಿನಚರಿಗಳಲ್ಲಿ ತಮ್ಮನ್ನು ತೊಡಗಿಸಿ ನಮ್ಮ ಏಳಿಗೆಗಾಗಿ ಶ್ರಮಿಸಿದ  ಶಿಕ್ಷಕರು ತಮಗಾಗಿ ಸಮಯವನ್ನು ಮೀಸಲಿಟ್ಟಿದ್ದು ನಾಕಾಣೆ. ಈ ಪರಿ  ಕಾಳಜಿಯಿಂದ, ನಿಸ್ವಾರ್ಥತೆಯಿಂದ, ನಮ್ಮನ್ನು ಒಳ್ಳೆಯ ಪ್ರಜ್ಞಾವಂತ ಪ್ರಜೆಗಳನ್ನಾಗಿ ಮಾಡಿದ ನಮ್ಮ ಶಿಕ್ಷಕರಿಗೆ ಇಂದು ಕೃತಜ್ಞತೆಗಳನ್ನು ಸಲ್ಲಿಸುವ ಸದಾವಕಾಶ ನಮ್ಮದು.

ಮೊನ್ನೆ ಡಿಸೆಂಬರ್ 1ರಂದು ನವೋದಯ ವಿದ್ಯಾಲಯದ 1999ನೇ ಬ್ಯಾಚ್ ನ ವಿದ್ಯಾರ್ಥಿಗಳು ತಾವು ಶಾಲೆಗೆ ಸೇರಿದ ಬೆಳ್ಳಿಹಬ್ಬದ ಸವಿನೆನಪಿನಲ್ಲಿ ಮತ್ತೊಮ್ಮೆ ಶಾಲೆಯಲ್ಲಿ ಸಮಾಗಮವಾಗುವ ಸುಂದರ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಈ ಬೆಳ್ಳಿಹಬ್ಬದ ಸಂಗಮ ಕಾರ್ಯಕ್ರಮಕ್ಕೆ 1999-2006ರ ತಂಡದ ಬಹುತೇಕ ವಿದ್ಯಾರ್ಥಿಗಳು ಆಗಮಿಸಿದ್ದರು. ಅನೇಕರು ತಮ್ಮ ಕುಟುಂಬ ಸಮೇತ ಭಾಗವಹಿಸಿದ್ದರು. ಶಾಲೆಯಲ್ಲಿ ತಾವು ಅನುಭವಿಸಿದ ಮಧುರ ನೆನಪುಗಳನ್ನು ಮೆಲುಕು ಹಾಕಿ ನಕ್ಕು ನಲಿದೆವು.

ಈ ಸಮಯದಲ್ಲಿ, ನಮ್ಮ ಜೀವನವನ್ನು ರೂಪಿಸಿದ ಶಾಲೆಗೆ ಒಂದು ದುಂಡುಕಲೆಮನೆ” (Amphitheatre) ಯನ್ನು ಕೊಡುಗೆಯಾಗಿ ನೀಡಿ,  ಸುಂದರ ಬದುಕುಗಳನ್ನು ಕಟ್ಟಿಕೊಳ್ಳಲು ನೆರವಾದ   ಎಲ್ಲಾ ಶಿಕ್ಷಕ ವೃಂದದವರಿಗೆ ಗುರುವಂದನೆಗಳನ್ನು ಸಲ್ಲಿಸುವ ಅಮೃತಘಳಿಗೆ ನಮ್ಮ ಪಾಲಾಗಿದ್ದಕ್ಕೆ, ನಾವೆಲ್ಲಾ ಹರ್ಷೋನ್ಮತ್ತರಾಗಿದ್ದೇವೆ ಮತ್ತು ಅವರ ಅಪ್ರತಿಮ, ನಿಸ್ವಾರ್ಥ ಸೇವೆಯನ್ನು ಸ್ಮರಿಸಲು ಸಿಕ್ಕ ಸದಾವಕಾಶ ನಮ್ಮ ಸೌಭಾಗ್ಯವೆಂದು ತಿಳಿಯುತ್ತಾ ಮನಃಪೂರ್ವಕವಾಗಿ ವಂದಿಸುತ್ತೇವೆ.

– ಇಂತಿ ನಿಮ್ಮ ಪ್ರೀತಿಯ ಶಿಷ್ಯಬಳಗ.

ಹಾಗೆಯೇ, ಈ ಸುಂದರ ಕ್ಷಣಗಳಲ್ಲಿ ಭಾಗಿಯಾಗಿ ನಮ್ಮ ಸಂತೋಷವನ್ನು ನೂರ್ಮಡಿಗೊಳಿಸಿದ, ನಮ್ಮೆಲ್ಲಾ ಸ್ನೇಹಿತರಿಗೂ ಅವರ ಕುಟುಂಬದವರಿಗೂ ಅನಂತ ಧನ್ಯವಾದ ತಿಳಿಸುತ್ತಾ, ದೇವರು ನಮ್ಮೆಲ್ಲರಿಗೂ ಮತ್ತೆ-ಮತ್ತೆ ಇಂತಹ ಸುದಿನಗಳನ್ನು ಮರುಕಳಿಸಲಿ ಎಂದು ಪ್ರಾರ್ಥಿಸುತ್ತಾ ನಮ್ಮ ಸ್ನೇಹ ಬಳಗ ಇನ್ನಷ್ಟು ಗಟ್ಟಿಯಾಗಿರಲೆಂದು ಆಶಿಸುತ್ತೇವೆ.

1999-2006ರ ಗೆಳೆಯ ಬಳಗ 01-ಡಿಸೆಂಬರ್-2024

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ