ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸುವರ್ಣಸೌಧದಲ್ಲೇ ಸಿಟಿ ರವಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮದೇ ಲೆಟರ್‌ಹೆಡ್ ಮೇಲೆ ಅವಾಚ್ಯಪದ ಬಳಕೆ ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಿಟಿ ರವಿ ವಿರುದ್ಧ ಸಭಾಪತಿಗೆ ದೂರು, ಪದಚ್ಯುತಿಗೆ ಆಗ್ರಹ : ಹೀಗಾಗಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು. ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಲೈಂಗಿಕ ಬಣ್ಣದ ಟೀಕೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.

ಠಾಣೆಯಲ್ಲಿ ಗುರುವಾರ ರಾತ್ರಿ ಹೇಳಿಕೆ ದಾಖಲಿಸಿಕೊಂಡು ಇದರ ಚಿತ್ರೀಕರಣ ಮಾಡಲಾಗಿದೆ. ನಾನು ಸಚಿವೆ ವಿರುದ್ಧ ಯಾವುದೇ ರೀತಿಯ ಅಶ್ಲೀಲ ಪದ ಬಳಸಿಲ್ಲ. ಮಹಿಳೆಯರ ಬಗ್ಗೆ ನನಗೆ ಗೌರವಿದೆ. ಯಾರೋ ಹೇಳಿದ ಹೇಳಿಕೆ ಕೇಳಿ ನನ್ನ ಮೇಲೆ ಸಚಿವೆ ಸುಳ್ಳು ದೂರು ದಾಖಲಿಸಿದ್ದಾರೆ. ದೂರಿನಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದು ಸಿಟಿ ರವಿ ಹೇಳಿಕೆ ನೀಡಿದ್ದಾರೆ.
ಏನಿದು ಘಟನೆ ?
ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅವಹೇನಕಾರಿ ಹೇಳಿಕೆ ಖಂಡಿಸಿ ಇಂದು ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಶಾಸಕರು ಸುವರ್ಣಸೌಧದ ತಮ್ಮ ಕುರ್ಚಿಗಳ ಮುಂದೆ ಅಂಬೇಡ್ಕರ್ ಅವರ ಫೋಟೋವನ್ನು ಪ್ರದರ್ಶಿಸಿದರು. ಶೂನ್ಯ ಅವಧಿಯಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಆಡಳಿತ ಸದಸ್ಯರು ಅಮಿತ್ ಶಾ ಅವರನ್ನು ಬಂಧಿಸಿ, ರಾಜೀನಾಮೆ ಪಡೆಯುವಂತೆ ಆಗ್ರಹಿಸಿದರು. ಇದೇ ವೇಳೆ, ಬಿಜೆಪಿ ಸದಸ್ಯರು ಕೂಡ ಅಂಬೇಡ್ಕರ್ ಭಾವಚಿತ್ರ ಹಿಡಿದು, ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಗೆ ಭಾರತ ರತ್ನ ನೀಡಲಿಲ್ಲ ಎಂದು ಆರೋಪಿಸಿದರು.
ಈ ನಡುವೆ, ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದು ಸಿ.ಟಿ ರವಿ ಆರೋಪಿಸಿದರು. ಇದಕ್ಕೆ ಕೌಂಟರ್ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀವು ರಸ್ತೆ ಅಪಘಾತದಲ್ಲಿ ಇಬ್ಬರನ್ನು ಕೊಲೆ ಮಾಡಿದ್ದೀರಿ, ಹಾಗಾಗಿ, ನೀವು ಕೊಲೆಗಾರರು ಎಂದು ದೂರಿದರು. ಇದರಿಂದ ರೊಚ್ಚಿಗೆದ್ದ ಸಿಟಿ ರವಿ ಅಶ್ಲೀಲ ಪದ ಬಳಸಿ, ನಿಮ್ಮನ್ನು ಪ್ರಾಸ್ಟಿಟೂಟ್ (ವೇಶ್ಯೆ) ಹಾಗೆ ಕರೆಯೋಕೆ ಆಗುತ್ತಾ ಎಂದರು ಎಂದು ಆರೋಪಿಸಲಾಗಿದೆ.
ಇದರಿಂದ ಆಕ್ರೋಶಗೊಂಡ ಹೆಬ್ಬಾಳ್ಕರ್ ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳು ಇಲ್ಲವೇ? ನಿಮ್ಮ ತಾಯಿನೂ ಒಂದು ಹೆಣ್ಣು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಆಡಳಿತ ಪಕ್ಷದ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ, ಸಿಟಿ ರವಿ ವಿರುದ್ಧ ದೂರು ನೀಡಿದ್ದು, ಅವರನ್ನು ಸದಸ್ಯ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ಮಧ್ಯೆ, ಬೆಳಗಾವಿಯ ಸುವರ್ಣಸೌಧದ ಮೊಗಸಾಲೆಯಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ವಿಧಾನಪರಿಷತ್ನ ಕಾರಿಡಾರ್ನಲ್ಲಿ ಹೋಗುತ್ತಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಗಲಿಗರು ಏಕಾಏಕಿ ಸಿಟಿ ರವಿಗೆ ಅಡ್ಡ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ಕೂಡಲೇ ಮಾರ್ಷಲ್ಗಳು ಅವರನ್ನು ತಡೆದಿದ್ದಾರೆ. ಸಿಟಿ ರವಿ ಹೇಳಿಕೆ ವಿಧಾನಪರಿಷತ್ ನಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಅನಿರ್ಧಿಷ್ಟಾವದಿಗೆ ಮುಂದೂಡಿದ್ದಾರೆ.



