ಚಿಕ್ಕಮಗಳೂರು ನಗರ ಸಮೀಪ ಮೈಲುತುತ್ತ ಕಳವು ಮಾಡಿದ ಮೂವರನ್ನು ಬಂಧಿಸಿರುವ ಪೊಲೀಸರು 88.21 ಲಕ್ಷ ರೂ. ಬೆಲೆಯ ಮೈಲು ತುತ್ತು ವಶಕ್ಕೆ ಪಡೆದಿದ್ದಾರೆ.
ರಾಂಪುರದಲ್ಲಿರುವ ತಮ್ಮ ಮಾಲೀಕತ್ವದ PCM ಕಾಪರ್ ಸಲ್ಫೇಟ್ ಮೈಲುತುತ್ತ ತಯಾರಿಕಾ ಘಟಕದಲ್ಲಿ ಕೆಲಸವನ್ನು ಮಾಡುತ್ತಿದ್ದ ಇಬ್ಬರು ಸುಮಾರು 16,320. ಕೆ,ಜಿ ಯಷ್ಟು ಕಾಪರ್ ಸ್ಕ್ರಾಪ್ ಅನ್ನು ಕಳ್ಳತನ ಮಾಡಿದ್ದಾರೆ ಎಂದು ಪ್ರಭಾಕರ್ ಮೇಕನಗದ್ದೆಯವರು ದೂರು ನೀಡಿದ್ದರು.
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಾದ ಸಿಂದಗಿ ತಾಲೂಕಿನ ರಾಜಕುಮಾರ, ಗೌರೀಶ, ಚಿಕ್ಕಮಗಳೂರು ಅಂಬುಲೆನ್ಸ್ ಡ್ರೈವರ್ ಮಹಮ್ಮದ್ ಜುನೈದ್ ಇವರನ್ನು ಬಂಧಿಸಲಾಗಿದೆ.
ಬಂಧಿತರಿಂದ 88,21,750/- ರೂ ಮೌಲ್ಯದ 12,425 ಕೆ.ಜಿ ಕಾಪರ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಮಿನಿ ಅಂಬುಲೆನ್ಸ್ ಮತ್ತು ಅಶೋಕ್ ಲೈಲ್ಯಾಂಡ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಲ್ಲಿ ರಾಜಕುಮಾರ ಮತ್ತು ಗೌರೀಶ ಕಳುವಾದ ಮೈಲುತುತ್ತು ಘಟಕದಲ್ಲಿಯೇ ಕೆಲಸಗಾರರಾಗಿದ್ದು, ಮಹಮ್ಮದ ಜುನೈದ್ ಚಿಕ್ಕಮಗಳೂರು ನಗರದಲ್ಲಿ ಅಂಬುಲೆನ್ಸ್ ಡ್ರೈವರ್ ಜೊತೆಗೆ ಗುಜರಿ ವ್ಯಾಪಾರಿಯಾಗಿದ್ದಾನೆ ಎನ್ನಲಾಗಿದೆ.
ಮಹಮ್ಮದ್ ಜುನೈದ್ ನೊಂದಿಗೆ ಶಾಮಿಲಾಗಿ ಕೆಲಸಗಾರರು ತಾವು ಕೆಲಸ ಮಾಡುತ್ತಿದ್ದ ಪಾಕ್ಟರಿಯಿಂದ ಮೈಲುತುತ್ತು ಕಚ್ಚಾವಸ್ತುವನ್ನು ಕದ್ದು ಸಾಗಿಸುತ್ತಿದ್ದರು ಎನ್ನಲಾಗಿದೆ.
ಸದರಿ ಕಳವು ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸ್ ತಂಡಲ್ಲಿ ಪಿ.ಎಸ್.ಐ. ಗಳಾದ ರವಿ ಜಿ ಎ, ಶಂಭುಲಿಂಗನಗೌಡ ಮತ್ತು ಸತೀಶ್ ಕೆ ಎಸ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ನಂಜಪ್ಪ, ದಿನೇಶ್, ಪ್ರದೀಪ ಹೆಚ್ ಜಿ, ನವೀನ ಎ ಎಸ್, ಮಹಮ್ಮದ್ ರಫೀಕ್ ಮತ್ತು ರವೀಂದ್ರ ರವರು ಕಾರ್ಯನಿರ್ವಹಿಸಿರುತ್ತಾರೆ.


