ಕಾಡಾನೆ ದಾಳಿಯಿಂದ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ಹೊಂಗಡಹಳ್ಳ ಬಳಿ ಘಟನೆ ನಡೆದಿದೆ.
ಹೊಂಗಡಹಳ್ಳ ಗ್ರಾಮದ ಕೃಷಿಕ ವೀರೇಶ್ (62) ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮ್ಮ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಕಾರ್ಯದಲ್ಲಿ ನಿರತರಾಗಿದ್ದಾಗ ಏಕಾಏಕಿ ವೀರೇಶ್ ಅವರ ಮೇಲೆ ದಾಳಿ ಮಾಡಿದ ಕಾಡಾನೆ ಅವರನ್ನು ಸೊಂಡಿಲಿನಿಂದ ಎತ್ತಿ ದೂರಕ್ಕೆ ಎಸೆದಿದೆ, ಅವರು ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಕಂಡು ಇವರು ಮೃತಪಟ್ಟಿದ್ದಾರೆ ಎಂದು ತಿಳಿದು ಆನೆ ಮುಂದೆ ಹೋಗಿದೆ.
ಆನೆ ದಾಳಿಯಿಂದ ವೀರೇಶ್ ಅವರ ಪಕ್ಕೆಲುಬುಗಳು ಮುರಿದಿವೆ, ತಲೆ, ಹಣೆ, ಕೈ ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಅವರಿಗೆ ಹಾಸನ ಜಿಲ್ಲಾ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಭಾಗದಲ್ಲಿ ಕಾಡಾನೆಗಳು ನಿರಂತರ ಉಪಟಳ ನೀಡುತ್ತಿದ್ದು, ರೈತರು ಕೃಷಿ ಜಮೀನುಗಳಿಗೆ ತೆರಳಲು ಭಯಪಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ.



